ADVERTISEMENT

ಮೈಸೂರಿನಲ್ಲಿ ದೇಸಿ ಕ್ರೀಡಾಕೂಟ: ಆಡಿದವರಿಗೆ ಕೋಳಿ, ನೋಡಿದವರಿಗೆ ಮೊಟ್ಟೆ!

ಕುಂಬಾರಕೊಪ್ಪಲು: ‘ದೇಸಿ ಕ್ರೀಡೆ’ ಕಲರವ – ಗೆದ್ದವರಿಗೆ ಟಗರು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 0:54 IST
Last Updated 13 ಫೆಬ್ರುವರಿ 2023, 0:54 IST
ಕುಂಬಾರಕೊಪ್ಪಲಿನ ಕೆಂಪೇಗೌಡ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ದೇಸಿ ಕ್ರೀಡೆ’ಯಲ್ಲಿ ಸ್ಪರ್ಧಿಸಿದ ಮಹಿಳೆಯೊಬ್ಬರು ಬಕೆಟ್‌ಗೆ ಚೆಂಡನ್ನು ಎಸೆದರು –ಪ್ರಜಾವಾಣಿ ಚಿತ್ರ
ಕುಂಬಾರಕೊಪ್ಪಲಿನ ಕೆಂಪೇಗೌಡ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ದೇಸಿ ಕ್ರೀಡೆ’ಯಲ್ಲಿ ಸ್ಪರ್ಧಿಸಿದ ಮಹಿಳೆಯೊಬ್ಬರು ಬಕೆಟ್‌ಗೆ ಚೆಂಡನ್ನು ಎಸೆದರು –ಪ್ರಜಾವಾಣಿ ಚಿತ್ರ   

ಮೈಸೂರು: ನಗರದ ಕುಂಬಾರಕೊಪ್ಪಲಿನಲ್ಲಿ ‘ದೇಸಿ ಕ್ರೀಡೆ’ಗಳ ಕಲರವ ಭಾನುವಾರ ಮನೆ ಮಾಡಿತ್ತು. 84 ಸ್ಪರ್ಧಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ‘ಕ್ರೀಡಾ ಸ್ಫೂರ್ತಿ’ ಮೆರೆದರು. ಆಡಿದವರಿಗೆ ಕೋಳಿ, ವೀಕ್ಷಕರಿಗೆ ಮೊಟ್ಟೆ ನೀಡಿದ್ದು ವಿಶೇಷವಾಗಿತ್ತು.

ಕೆಂಪೇಗೌಡ ಕ್ರೀಡಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಯುವ ಸೇವಾ ಬಳಗವು ಆದಿಶಕ್ತಿ ಹಬ್ಬ ಮತ್ತು ‘ಆದಿಶಕ್ತಿ ನಾಟಿ ಕಿಲಾಡಿ ಜನೋತ್ಸವ’ದಲ್ಲಿ ಹಗ್ಗ ಜಗ್ಗಾಟ, ಲಗೋರಿ, ಬಕೆಟ್‌ಗೆ ಚೆಂಡು, ಇಟ್ಟಿಗೆ ಮೇಲಿನ ನಡಿಗೆ, ಮಡಕೆ ಒಡೆಯುವುದು ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪೈಪೋಟಿ ನೀಡಿದರು.

ಒಂದು ತಂಡದಲ್ಲಿ ಇಬ್ಬರು ಸ್ಪರ್ಧಿಗಳಂತೆ 42 ತಂಡ ರಚಿಸಲಾಗಿತ್ತು. ಅತಿ ಹೆಚ್ಚು ಸ್ಪರ್ಧೆಗಳಲ್ಲಿ ಗೆದ್ದ ರಕ್ಷಿತಾ ಹಾಗೂ ರಿತುನಾ ಅವರ ತಂಡಕ್ಕೆ ಮೊದಲನೇ ಬಹುಮಾನವಾಗಿ ಟಗರು ನೀಡಿದರೆ, 2ನೇ ಸ್ಥಾನ ಪಡೆದ ಪ್ರಮೀಳಾ ಹಾಗೂ ಪ್ರಭಾ ಅವರಿಗೆ 20 ನಾಟಿ ಕೋಳಿಯನ್ನು ಬಹುಮಾನವಾಗಿ ನೀಡಲಾಯಿತು. 3ನೇ ಬಹುಮಾನವಾಗಿ 300 ಮೊಟ್ಟೆ ಹಾಗೂ ಐದು ಕೋಳಿಯನ್ನು ಶೋಭಾ ಹಾಗೂ ಮಂಜುಳಾ ಪಡೆದರು.

ADVERTISEMENT

ಮಹಿಳೆಯರೇ ಹೆಚ್ಚಾಗಿ ಭಾಗವಹಿಸಿದ್ದ ಸ್ಪರ್ಧೆಗಳನ್ನು ನೋಡಲು ಬಂದ ವೀಕ್ಷಕರಿಗೂ ಮೊಟ್ಟೆ ನೀಡಲಾಯಿತು. ಐನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಪ್ರೋತ್ಸಾಹಕರು ಜಮಾಯಿಸಿದ್ದರು. ಶಿಳ್ಳೆ ಹಾಗೂ ಚಪ್ಪಾಳೆ ಮೂಲಕ ಸ್ಪರ್ಧಿಗಳಿಗೆ ಹುರಿದುಂಬಿಸಿದರು.

ಬಳಗದ ಅಧ್ಯಕ್ಷ ದೀಪಕ್‌ ಗೌಡ, ಉಪಾಧ್ಯಕ್ಷ ಯೋಗರಾಜ್‌ಗೌಡ, ಕಾರ್ಯದರ್ಶಿ ಮಧುಸೂದನ್‌ ಗೌಡ, ಸಂಚಾಲಕ ಮಂಜುನಾಥ್, ಖಜಾಂಚಿ ಭರತ್‌ ಗೌಡ, ದಿಲೀಪ್‌ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.