ADVERTISEMENT

ಮೈಸೂರು: ಬಾಲಕಾರ್ಮಿಕರ ರಕ್ಷಣೆ; ಪ್ರಕರಣ ದಾಖಲು

ಕಾರ್ಮಿಕ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 3:41 IST
Last Updated 23 ಜೂನ್ 2021, 3:41 IST

ಮೈಸೂರು: ಇಲ್ಲಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಡಿಯಲ್ಲಿನ ಕಾಮಗಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಕ್ಕಳನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮಂಗಳವಾರ ರಕ್ಷಿಸಿದ್ದಾರೆ. ಈ ಕುರಿತು ನಿಗಮ ಮತ್ತು ನಿಗಮದಿಂದ ಕಾಮಗಾರಿಯನ್ನು ಗುತ್ತಿಗೆ ಪಡೆದವರ ವಿರುದ್ಧ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿನ ದೇವರಾಜ ಮೊಹಲ್ಲಾದಲ್ಲಿ ಸೆಸ್ಕ್‌ ವತಿಯಿಂದ ನಡೆಯುತ್ತಿದ್ದ ಭೂಮಿಯ ಒಳಗೆ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿಯಲ್ಲಿ ಮಕ್ಕಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ರಾಜೇಶ್‌ ಜಾದವ್ ದಾಳಿ ನಡೆಸಿ, ಒಬ್ಬ ಬಾಲಕಿ ಸೇರಿದಂತೆ ಮೂವರು ಮಕ್ಕಳನ್ನು ರಕ್ಷಿಸಿದರು.

‘ಪ್ರಾಥಮಿಕ ಹಂತದ ವಿಚಾರಣೆಯಲ್ಲಿ 15, 13 ಮತ್ತು 12 ವರ್ಷದವರು ತಾವೆಂದು ಮಕ್ಕಳು ಹೇಳಿಕೆ ನೀಡಿದರು. ವೈದ್ಯಕೀಯ ತಪಾಸಣೆ ನಡೆಸಿದಾಗ ಇವರಲ್ಲಿ ಒಬ್ಬ ಬಾಲಕ ಮಾತ್ರ 12 ವರ್ಷದವನಾಗಿದ್ದು, ಉಳಿದವರು 14 ವರ್ಷ ದಾಟಿದವರು ಎಂಬುದು ಗೊತ್ತಾಯಿತು. ಸದ್ಯ, ಸೆಸ್ಕ್ ಮತ್ತು ಇದರಿಂದ ಗುತ್ತಿಗೆ ಪಡೆದ ಏಷಿಯನ್ ಫ್ಯಾಬ್ ಟೆಕ್ ಲಿಮಿಟೆಡ್ ವಿರುದ್ಧ ದೇವರಾಜ ಠಾಣೆಗೆ ದೂರು ನೀಡಲಾಗಿದೆ’ ಎಂದು ರಾಜೇಶ್ ಜಾದವ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕಾರ್ಯಾಚರಣೆಯಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕರಾದ ವೀಣಾ, ನಿಖಿಲ್, ಬಾಲಕಾರ್ಮಿಕ ಯೋಜನಾ ಸಂಘ ನಿರ್ದೇಶಕರಾದ ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.