ADVERTISEMENT

ಕೋವಿಡ್‌ನಿಂದ ಮೃತಪಟ್ಟ ತಾಯಿ ಮುಖ ನೋಡಲೂ ಬಾರದ ಮಕ್ಕಳು!

ಕೋವಿಡ್‌ ಲಕ್ಷಣದಿಂದ ಮೃತಪಟ್ಟ ಒಬ್ಬಂಟಿ ಮಹಿಳೆ; ಅಂತ್ಯಕ್ರಿಯೆಗೆ ನೆರವಾದ ಪಾಲಿಕೆ ಸಿಬ್ಬಂದಿ

ಕೆ.ಓಂಕಾರ ಮೂರ್ತಿ
Published 23 ಮೇ 2021, 13:38 IST
Last Updated 23 ಮೇ 2021, 13:38 IST
ಶವ ಸಾಗಿಸಿದ ಪಾಲಿಕೆ ಸಿಬ್ಬಂದಿ
ಶವ ಸಾಗಿಸಿದ ಪಾಲಿಕೆ ಸಿಬ್ಬಂದಿ   

ಮೈಸೂರು: ಮಹಿಳೆಯೊಬ್ಬರು ಕೋವಿಡ್‌–19 ರೋಗ ಲಕ್ಷಣದಿಂದ ಮೃತಪಟ್ಟಿದ್ದು, ಮಕ್ಕಳು ಹಾಗೂ ಸಂಬಂಧಿಕರು ಅಂತಿಮ ವಿಧಿವಿಧಾನ ನಡೆಸಲು ಬಾರದ ಕಾರಣ ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕಿಯೊಬ್ಬರು ಸಹಾಯಕ್ಕೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.

ಮೃತಪಟ್ಟ ಮಹಿಳೆ ಸುಮಾರು 55 ವರ್ಷದವರಾಗಿದ್ದು, ಮೈಸೂರು ನಗರದ ಮಹದೇಶ್ವರ ಬಡಾವಣೆಯಲ್ಲಿ ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಜೀವ ಹೋಗಿ ಐದು ಗಂಟೆಯಾದರೂಅವರ ಕಡೆಯ ಯಾರೊಬ್ಬರೂ ಬಂದಿಲ್ಲ. ದೂರವಾಣಿ ಕರೆ ಮಾಡಿದರೂ ಸ್ಪಂದಿಸಿಲ್ಲ. ಆಗ ಆರೋಗ್ಯ ನಿರೀಕ್ಷಕಿ ನಮ್ರತಾ ಅವರು ಪಾಲಿಕೆಯ ಸಿಬ್ಬಂದಿಯನ್ನು ಕರೆಸಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದಾರೆ. ಬಡಾವಣೆಯ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್‌, ಸ್ಯಾನಿಟರಿ ಸೂಪರ್‌ವೈಸರ್‌ ಮೋಹನ್, ವಾರ್ಡ್‌ ಮೇಸ್ತ್ರಿ ಕಣ್ಣನ್‌ ಕೂಡ ಕೈಜೋಡಿಸಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.

ಮಹಿಳೆಯು ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಇಬ್ಬರು ಪುತ್ರಿ ಯರನ್ನು ಮದುವೆ ಮಾಡಿಕೊಟ್ಟಿದ್ದು, ಅವರು ರಿಂಗ್‌ ರಸ್ತೆ ಬಳಿ ವಾಸವಾಗಿದ್ದಾರೆ ಎಂಬುದು ಗೊತ್ತಾಗಿದೆ. ಮಹಿಳೆಯು ಜ್ವರದಿಂದ ಬಳಲುತ್ತಿರುವ ಬಗ್ಗೆ ಮನೆಯ ಮಾಲೀಕರು ಪಾಲಿಕೆ ಗಮನಕ್ಕೆ ತಂದಿದ್ದರು.

ADVERTISEMENT

‘ಮಹಿಳೆಗೆ ಗುರುವಾರ ಜ್ವರ ಬಂದಿತ್ತು. ಹೀಗಾಗಿ, ಮನೆಗೆ ಹೋಗಿ ವಿಚಾರಿಸಿಕೊಂಡು ಬಂದಿದ್ದೆವು. ಪಾಲಿಕೆ ವತಿಯಿಂದ ಈಗಾಗಲೇ ಮನೆಮನೆಗೆ ತೆರಳಿ ಕೋವಿಡ್‌ ರೋಗ ಲಕ್ಷಣ ಇರುವವರಿಗೆ ಔಷಧ ಕಿಟ್‌ ನೀಡುತ್ತಿದ್ದೇವೆ. ಹಾಗೆಯೇ ಈ ಮಹಿಳೆಗೂ ಕಿಟ್‌ ನೀಡಿದ್ದೆವು’ ಎಂದು ನಮ್ರತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾರನೇ ದಿನ (ಶುಕ್ರವಾರ) ಬೆಳಿಗ್ಗೆ 7 ಗಂಟೆಗೆ ಹೋಗಿ ನೋಡಿದಾಗ, ಮಹಿಳೆ ಮೃತಪಟ್ಟಿದ್ದರು. ಕುಟುಂಬದಯಾರೂ ಜೊತೆಗಿಲ್ಲದ ಕಾರಣ ಅವರ ಪುತ್ರಿಯರಿಗೆ ಫೋನ್ ಮಾಡಿ ಮಾಹಿತಿ ನೀಡಿದೆವು. ಕೊನೇ ಬಾರಿ ತಾಯಿಯ ಮುಖ ನೋಡಲು ಮಕ್ಕಳ ಬರಬಹುದೆಂದು ಕಾದೆವು. ಮಧ್ಯಾಹ್ನ 12 ಗಂಟೆಯಾದರೂ ಬರುವ ಲಕ್ಷಣ ಕಾಣಿಸಲಿಲ್ಲ. ಮತ್ತೊಮ್ಮೆ ಕರೆ ಮಾಡಿದಾಗ ಒಬ್ಬರ ಫೋನ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಇನ್ನೊಬ್ಬರು ‘ನೀವೇ ಮಾಡಿಕೊಳ್ಳಿ’ ಎಂದರು.ಹೀಗಾಗಿ,ನಾವೇ ಪಾಲಿಕೆ ವಾಹನ ತರಿಸಿ ಸಾಗಿಸಿದೆವು. ವಿಜಯ ನಗರದ ನಾಲ್ಕನೇ ಹಂತದ ವಿದ್ಯುತ್‌ ಚಿತಾಗಾರದಲ್ಲಿ ಅನಾಥ ಶವವೆಂದು ಅಂತ್ಯಕ್ರಿಯೆ ನಡೆಸಲಾಯಿತು’ ಎಂದರು.

ಪುತ್ರಿಯರು ಹಾಗೂ ಸಂಬಂಧಿಕರು ಸೇರಿದಂತೆ ಯಾರೊಬ್ಬರೂ ಮುಂದೆ ಬಾರದ ಈ ಸಂದರ್ಭದಲ್ಲಿ ತಮ್ಮ ಜೀವ ಲೆಕ್ಕಿಸದೇ ಅಂತ್ಯಕ್ರಿಯೆಗೆ ನೆರವಾದ ಪಾಲಿಕೆ ಸಿಬ್ಬಂದಿ ಕೆಲಸಕ್ಕೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ.

***

ಕೋವಿಡ್‌ ಕಷ್ಟಕಾಲದಲ್ಲಿ ಪಾಲಿಕೆಯ ಎಲ್ಲಾ ಸಿಬ್ಬಂದಿ ಮಾನವೀಯತೆಯಿಂದ ಕೆಲಸ ಮಾಡುತ್ತಿದ್ದಾರೆ. ಅನಾಥ ಶವಗಳ ಅಂತ್ಯಸಂಸ್ಕಾರಕ್ಕೂ ನೆರವಾಗುತ್ತಿದ್ದಾರೆ

- ಡಾ.ನಾಗರಾಜ್‌, ಪಾಲಿಕೆ ಆರೋಗ್ಯಾಧಿಕಾರಿ

***

ಇಬ್ಬರು ಹೆಣ್ಣು ಮಕ್ಕಳಿದ್ದರೂ ಬಂದಿಲ್ಲ. ಸಂಬಂಧಗಳ ನಿಜವಾದ ಬಂಡವಾಳ ಈಗ ಗೊತ್ತಾಗುತ್ತಿದೆ. ಮಕ್ಕಳು ಏಕೆ ಈ ರೀತಿ ವರ್ತಿಸುತ್ತಾರೋ ಗೊತ್ತಿಲ್ಲ

ಕೆ.ವಿ.ಶ್ರೀಧರ್‌, ಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.