ADVERTISEMENT

ಎಚ್‌.ಡಿ.ಕೋಟೆ | ಖಾರವೇ ಇಲ್ಲದ ಮೆಣಸಿನಕಾಯಿ: ಬೀಜದ ಕಂಪನಿ ವಿರುದ್ಧ ಆಕ್ರೋಶ

ಕಳಪೆ ಬೀಜ ವಿತರಣೆ: ಕಂಪನಿ ವಿರುದ್ಧ ರೈತರ ಆಕ್ರೋಶ

ಸತೀಶ್‌ ಬಿ
Published 3 ಜೂನ್ 2020, 11:44 IST
Last Updated 3 ಜೂನ್ 2020, 11:44 IST
ಎಚ್.ಡಿ.ಕೋಟೆ ತಾಲ್ಲೂಕಿನ ಎಚ್.ಮಟಕೆರೆ ಗ್ರಾಮದ ಸಿದ್ದೇಗೌಡರು ತಮ್ಮ ಜಮೀನಿನಲ್ಲಿ ಬೆಳೆದಿರುವ ಮೆಣಸಿನ ಗಿಡವನ್ನು ಕೀಳುತ್ತಿರುವುದು.
ಎಚ್.ಡಿ.ಕೋಟೆ ತಾಲ್ಲೂಕಿನ ಎಚ್.ಮಟಕೆರೆ ಗ್ರಾಮದ ಸಿದ್ದೇಗೌಡರು ತಮ್ಮ ಜಮೀನಿನಲ್ಲಿ ಬೆಳೆದಿರುವ ಮೆಣಸಿನ ಗಿಡವನ್ನು ಕೀಳುತ್ತಿರುವುದು.   

ಎಚ್.ಡಿ.ಕೋಟೆ: ಮೆಣಸಿನಕಾಯಿ ಬಿತ್ತನೆ ಬೀಜದ ಕಂಪನಿಯ ನಿರ್ಲಕ್ಷ್ಯದಿಂದ ನೂರಾರು ರೈತರು ತಮ್ಮ ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಖಾರವೆ ಇಲ್ಲದೆ ಇರುವುದರಿಂದ ತಿಪ್ಪೆಗೆ ಎಸೆಯುವ ಸ್ಥಿತಿ ಉಂಟಾಗಿದೆ.

ತಾಲ್ಲೂಕಿನ ಎಚ್.ಮಟಕೆರೆ, ಹೈರಿಗೆ ಮತ್ತು ಬೊಪ್ಪನಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ನೂರಾರು ಎಕರೆಯಲ್ಲಿ ’ಬಂಗಾರಮ್ಮ‘ ತಳಿಯ ಮೆಣಸಿನಕಾಯಿ ಬೆಳೆದಿದ್ದು ಖಾರ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಅದನ್ನು ಕೊಳ್ಳುವವರೇ ಇಲ್ಲವಾಗಿದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಈಗ ದಿಕ್ಕೇ ತೋಚದಂತಾಗಿದೆ.

’ಗಿಡದಲ್ಲಿ ಮೆಣಸಿನಕಾಯಿ ಫಸಲು ಉತ್ತಮವಾಗಿ ಬಿಟ್ಟಿದೆ. ಆದರೆ, ಮೆಣಸಿನಕಾಯಿಗೆ ಖಾರದ ಗುಣವೆ ಇಲ್ಲ, ದಪ್ಪವಾಗಿದ್ದು, ಹಣ್ಣು ಸಹ ಆಗದೇ ಕೊಳೆತುಹೋಗುತ್ತಿದೆ. ಕಳೆದ ವರ್ಷ ಇದೇ ತಳಿಯನ್ನು ಬಿತ್ತನೆ ಮಾಡಿ ಉತ್ತಮ ಲಾಭ ಗಳಿಸಿದ್ದೆವು. ಆದ್ದರಿಂದ ಈ ಭಾರಿಯೂ ಅದೇ ತಳಿಯನ್ನು ಬೆಳೆದಿದ್ದೆವು. ಈಗ ತಿಪ್ಪೆಗೆ ಸುರಿಯುವ ಪರಿಸ್ಥಿತಿ ಬಂದೊದಗಿದೆ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

’ತೋಟಗಾರಿಕಾ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ರೈತರಿಗೆ ಆಗಿರುವ ಅನ್ಯಾಯಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು. ಕಳ‍‍ಪೆ ಬೀಜ ನೀಡಿ ಮೋಸ ಮಾಡಿರುವ ಕಂಪನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ರೈತರಾದ ಸಿದ್ದೇಗೌಡ, ಕೃಷ್ಣೇಗೌಡ, ಲೋಕೇಶ್‌ ಆಗ್ರಹಿಸಿದ್ದಾರೆ.

’ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದೇನೆ. ಮಹಾರಾಷ್ಟ್ರದ ಕಲಾಶ್‌ ಕಂಪನಿ ನೀಡಿರುವ ಬಿತ್ತನೆ ಬೀಜದಿಂದ ರೈತರು ನಷ್ಟಕ್ಕೀಡಾಗಿದ್ದಾರೆ. ಆಗಿರುವ ಅನ್ಯಾಯ ಸರಿಪಡಿಸಯವ ನಿಟ್ಟಿನಲ್ಲಿ ಕಂಪನಿಯೊಂದಿಗೆ ಮಾತನಾಡಿದ್ದೇನೆ. ಅವರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ. ಸೂಕ್ತ ಪರಿಹಾರ ನೀಡದಿದ್ದರೆ ರೈತರು ಗ್ರಾಹಕ ವೇದಿಕೆಗೆ ಹೋಗಬಹುದು ಎಂದು ’ಪ್ರಜಾವಾಣಿ’ಗೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ನೇತ್ರಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.