
ಸಾಲಿಗ್ರಾಮ: ತಾಲ್ಲೂಕಿನ ಪುರಾಣ ಪ್ರಸಿದ್ದ ಚುಂಚನಕಟ್ಟೆ ಕೋದಂಡರಾಮ ಬ್ರಹ್ಮರಥೋತ್ಸವ ಜ.16 ರಂದು (ಶುಕ್ರವಾರ) ಬೆಳಿಗ್ಗೆ 11.05ರಿಂದ 12.05 ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ನಡೆಯಲಿದೆ.
ಇದಕ್ಕಾಗಿ ದೇವಾಲಯದ ಅರ್ಚಕರ ವೃಂದ ಸಕಲ ಸಿದ್ಧತೆ ಕಯಗೊಂಡಿದ್ದು, ರಥೋತ್ಸವದ ಅಂಗವಾಗಿ ಕಳೆದ ಐದು ದಿನಗಳಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದೆ.
ದೇವಾಲಯದ ಪ್ರಾಂಗಣದಲ್ಲಿ ನಿಲ್ಲಿಸಿರುವ ರಥಕ್ಕೆ ಭಕ್ತರು ಕೋದಂಡರಾಮನ ದರ್ಶನ ಪಡೆದು ನಂತರ ಕೈಮುಗಿದು ಭಕ್ತಿ ಮೆರೆಯುತ್ತಿದ್ದಾರೆ.
ಪ್ರತಿ ವರ್ಷದಂತೆ ರಥೋತ್ಸವಕ್ಕೆ ಆದಿಚುಂಚನಗಿರಿ ಕ್ಷೇತ್ರದ ನಿರ್ಮಲಾನಂದಸ್ವಾಮಿ, ಗಾವಡಗೆರೆ ಮಠದ ನಟರಾಜಸ್ವಾಮಿ, ಯೋಗಾನಂದೇಶ್ವರ ಸರಸ್ಪತಿ ಮಠದ ಶಂಕರ ಭಾರತೀ ಮಹಾಸ್ವಾಮಿ, ಕಾಗಿನೆಲೆ ಶಿವಾನಂದಪುರಿಸ್ವಾಮಿ, ಬೆಟ್ಟದಪುರ ಮಠದ ಚನ್ನಬಸವದೇಶಿಕೇಂದ್ರಸ್ವಾಮಿ, ಕರ್ಪೂರವಳ್ಳಿ ಮಠದ ಅಭಿನವ ಚಂದ್ರಸೇಖರ ಶಿವಾಚಾರ್ಯ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸುವರು.
ನಂತರ ನಡೆಯುವ ಧಾರ್ಮಿಕ ಸಭೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತರಿರುವರು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಚಾಲನೆ ನೀಡುವರು. ಅಧ್ಯಕ್ಷತೆಯನ್ನು ಶಾಸಕ ಡಿ.ರವಿಶಂಕರ್ ವಹಿಸುವರು. ಮುಖ್ಯಅತಿಧಿಗಳಾಗಿ ಶಾಸಕರಾದ ಎಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ಕೆ.ಶಿವಕುಮಾರ್, ಡಾ.ತಿಮ್ಮಯ್ಯ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ, ಕುಪ್ಪೆ ಗ್ರಾ.ಪಂ ಅಧ್ಯಕ್ಷೆ ಶಾರದಮ್ಮ ವೆಂಕಟಪ್ಪ, ಉಪಾಧ್ಯಕ್ಷೆ ಗೀತಾ ಕಾಂತರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಉದಯ್ ಶಂಕರ್ ಪಾಲ್ಗೊಳ್ಳುವರು.
ರಥೋತ್ಸವಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಪ್ರತಿ ವರ್ಷದಂತೆ ಶಾಸಕ ಡಿ.ರವಿಶಂಕರ್ ದಾಸೋಹ ಆಯೋಜನೆ ಮಾಡಿದ್ದಾರೆ. ಸರತಿ ಸಾಲಿನಲ್ಲಿ ಕೋದಂಡರಾಮನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಹತ್ತು ಸಾವಿರ ಲಡ್ಡು ಪ್ರಸಾದ ತಯಾರಿಸಲಾಗಿದೆ. ರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈಸೂರು ಜಿಲ್ಲಾ ಗ್ರಾಮಾಂತರ ಡಿವೈಎಸ್‌ಪಿ ರಾಜಣ್ಣ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಆಯೋಜನೆ ಮಾಡಲಾಗಿದೆ.
ಭಕ್ತರಿಗೆ ಹತ್ತು ಸಾವಿರ ಲಡ್ಡು ಪ್ರಸಾದ ತಯಾರಿ ಭಕ್ತರಿಗೆ ಪ್ರತಿ ವರ್ಷದಂತೆ ದಾಸೋಹ ಆಯೋಜನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.