
ಮೈಸೂರು: ‘ಚುಟುಕು ಸಾಹಿತ್ಯಕ್ಕೆ ಹೆಚ್ಚಿನ ಮನ್ನಣೆ ಸಿಗುತ್ತಿದ್ದು, ಚುಟುಕು ಸಾಹಿತಿಗಳ ವಿಕಾಸಕ್ಕೆ ಹೆಚ್ಚಿನ ನೆರವು ದೊರೆಯುತ್ತಿದೆ’ ಎಂದು ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ರತ್ನಾ ಹಾಲಪ್ಪಗೌಡ ಹೇಳಿದರು.
ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ನಡೆದ ‘ಅಖಿಲ ಭಾರತ ಕನ್ನಡ ನುಡಿ ಸಿರಿ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.
ವಿಶೇಷ ಪುರವಣಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚುಟುಕುಗಳು ಈಗ ಪ್ರತಿನಿತ್ಯ ಪತ್ರಿಕೆಗಳಲ್ಲಿ ಮಿಂಚುತ್ತಿವೆ. ಪತ್ರಿಕೆಗಳು ಚುಟುಕುಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತಿವೆ. ಕುವೆಂಪು, ತೀನಂಶ್ರೀ, ಬಿಎಂಶ್ರೀ, ಡಿವಿಜಿ, ದಿನಕರ ದೇಸಾಯಿ ಸೇರಿದಂತೆ ಅನೇಕ ಸಾಹಿತಿಗಳು ಚುಟುಕು ಸಾಹಿತ್ಯ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದರು.
ಸಮ್ಮೇಳನ ಉದ್ಘಾಟಿಸಿದ ಕುವೆಂಪು ಭಾಷಾ ಪ್ರಾಧಿಕಾರ ಮಾಜಿ ಸದಸ್ಯೆ ಎಂ.ಎಸ್.ಶಶಿಕಲಾ ಗೌಡ, ‘ಕನ್ನಡದಲ್ಲಿರುವಷ್ಟು ಮಹಾಕಾವ್ಯ ಬೇರೆಲ್ಲಿಯೂ ಇಲ್ಲ. ವಚನ ಸಾಹಿತ್ಯ, ದಾಸ ಸಾಹಿತ್ಯ, ಲಾವಣಿ ಸೇರಿದಂತೆ ಎಲ್ಲವೂ ನಮ್ಮ ಸಾಹಿತ್ಯದಲ್ಲಿದೆ. ಹೀಗಾಗಿ ಗ್ರೀಕ್, ಲ್ಯಾಟಿನ್ ನಂತರ ಕನ್ನಡವೇ ಪುರಾತನ ಹಾಗೂ ಶ್ರೀಮಂತ ಭಾಷೆ’ ಎಂದು ಹೇಳಿದರು.
ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾನಂ ಲೋಕೇಶ್, ಕರ್ನಾಟಕದ ಜ್ವಲಂತ ಸಮಸ್ಯೆಗಳು ಹಾಗೂ ಪರಿಹಾರ ಕುರಿತು ವಿಚಾರ ಮಂಡಿಸಿದರು. ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.
ಗಜೇಂದ್ರಗಡದ ಕಾಲಜ್ಞಾನ ಮಠದ ಶರಣ ಬಸವೇಶ್ವರ ಸ್ವಾಮೀಜಿ, ತಡಕಲೂಕು ಕ್ಷೇತ್ರದ ಅಘೋರಿ ತೋತಾಪುರಿ ಸೋಮಶೇಖರ ಗುರೂಜಿ ಸಾನ್ನಿಧ್ಯ ವಹಿಸಿದ್ದರು.
ಕಾರಟಗಿಯ ಚಿಂತಕ ಗಿರಿಜಾ ಶಂಕರ್ ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಟಿ.ತ್ಯಾಗರಾಜು, ಚಲನಚಿತ್ರ ನಟ ಶಿವಕುಮಾರ್ ಆರಾಧ್ಯ, ಎಂ.ಬಿ.ಅಳವಂಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.