ಮೈಸೂರು: ‘ಭಾವನೆ ಹಾಗೂ ಕನಸುಗಳ ತಾಕಲಾಟದ ಪ್ರತಿಬಿಂಬವೇ ಸಿನಿಮಾ. ಮನುಷ್ಯನ ಅಂತರಾಳದ ಭಾವನೆಗಳನ್ನು ಹೊರಹಾಕುವ ಮಾಧ್ಯಮವಾಗಿ ಅದು ರೂಪುಗೊಳ್ಳುತ್ತಿದೆ’ ಎಂದು ಸಿನಿಮಾ ಸಂಕಲನಕಾರ ಎಂ.ಎನ್.ಸ್ವಾಮಿ ಹೇಳಿದರು.
ಇಲ್ಲಿನ ಗೋಕುಲಂನ ಅಂತರರಾಷ್ಟ್ರೀಯ ಯೂಥ್ ಹಾಸ್ಟೆಲ್‌ನಲ್ಲಿ ಮನುಜಮತ ಸಿನಿಯಾನದ ‘ಮೈಸೂರು ಸಿನಿಮಾ ಹಬ್ಬ’ವನ್ನು ಉದ್ಘಾಟಿಸಿ ಮಾತನಾಡಿದರು.
‘ಮನುಷ್ಯ ಜೀವನದ ವ್ಯಾಪಾರಗಳನ್ನು ಮರುಸೃಷ್ಟಿಸುವ ಕೆಲಸ ಸಿನಿಮಾಗಳಿಂದ ನಡೆಯುತ್ತಿದೆ. ಶೋಷಣೆ, ಅಸಮಾನತೆ, ದಬ್ಬಾಳಿಕೆಗಳನ್ನು ಕಲಾತ್ಮಕವಾಗಿ ಸೃಷ್ಟಿಸಿ ಬೌದ್ಧಿಕ ಚಿಂತನೆಗೆ ಒಳಪಡಿಸುವ ಕ್ರಿಯೆ ಸಾಧ್ಯವಾಗಿದೆ’ ಎಂದರು.
‘ಸಾಮಾಜಿಕ ಅನ್ಯಾಯ, ನಾಗರಿಕ ಸಮಾಜಗಳ ಪ್ರತಿ ಸೃಷ್ಟಿಸಿ ವಿಶ್ಲೇಷಣೆ ಮಾಡುವ ಕ್ರಿಯೆಯು ಸಿನಿಮಾಗಳಿಂದ ಆಗಲಿದ್ದು, ಇದನ್ನು ಸರಿಯಾದ ರೀತಿಯಲ್ಲಿ ಅರ್ಥೈಸಲು ಸಿನಿಮಾ ಹಬ್ಬಗಳು ಸಹಕಾರಿ. ಶಾಲಾ ಕಾಲೇಜುಗಳಲ್ಲೂ ಸಿನಿಮಾ ಕ್ಲಬ್‌ಗಳನ್ನು ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು.
ಬರಹಗಾರ್ತಿ ಮೋಳಿವರ್ಗಿಸ್ ಮಾತನಾಡಿ, ‘ವಿಶ್ವ ಸಿನಿಮಾಗಳು ಆಯಾ ದೇಶದಲ್ಲಿ ಧರ್ಮದ ಹೆಸರಿನಲ್ಲಾಗುವ ರಾಜಕಾರಣ, ಸಾಂಸ್ಕೃತಿಕ ಪಲ್ಲಟಗಳನ್ನು ವ್ಯಕ್ತಪಡಿಸುತ್ತಿವೆ. ವಿಶ್ವ ಸಿನಿಮಾಗಳ ಗುಣಮಟ್ಟ ಕಾಪಾಡಿಕೊಳ್ಳಲು ನಿರ್ದೇಶಕ ಅಡೂರು ಗೋಪಾಲಸ್ವಾಮಿ ಅವರ ಸಿನಿಮಾಗಳು ಉದಾಹರಣೆಯಾಗಿವೆ’ ಎಂದರು.
ಸಿನಿಯಾನದ ಸಂಚಾಲಕ ಐವಾನ್ ಡಿ ಸಿಲ್ವಾ, ಸಿನಿಮಾ ವಿಮರ್ಶಕರಾದ ಕೆ.ಬೋಗಿರಾಜ್, ಕೆ.ಫಣಿರಾಜ್, ಮೈಸೂರಿನ ಸಿನಿಯಾನದ ಸಂಚಾಲಕರಾದ ಯಡುನಂದನ್ ಕಿಲಾರ, ಫಿಲಂ ಕ್ಲಬ್ ಮನು, ಗೌರೀಶ್ ಕಪನಿ, ಮಳವಳ್ಳಿ ಆದರ್ಶ್, ಲೋಕೇಶ್ ಮೊಸಳೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.