ADVERTISEMENT

ನಾಗರಿಕರ ಸಮಸ್ಯೆ ಆಲಿಸಿದ ಶಾಸಕ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2018, 17:24 IST
Last Updated 20 ಜುಲೈ 2018, 17:24 IST
ಮೈಸೂರಿನ ಗಂಗೋತ್ರಿ ಬಡಾವಣೆಗೆ ಭೇಟಿ ನೀಡಿದ ಶಾಸಕ ಎಲ್‌.ನಾಗೇಂದ್ರ ಅವರು ಸಾರ್ವಜನಿಕರ ಕುಂದು ಕೊರತೆ ಆಲಿಸಿದರು
ಮೈಸೂರಿನ ಗಂಗೋತ್ರಿ ಬಡಾವಣೆಗೆ ಭೇಟಿ ನೀಡಿದ ಶಾಸಕ ಎಲ್‌.ನಾಗೇಂದ್ರ ಅವರು ಸಾರ್ವಜನಿಕರ ಕುಂದು ಕೊರತೆ ಆಲಿಸಿದರು   

ಮೈಸೂರು: ಶಾಸಕ ಎಲ್‌.ನಾಗೇಂದ್ರ ಅವರು ನಗರದ ಗಂಗೋತ್ರಿ ಬಡಾವಣೆಯಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.

ವಾರ್ಡ್‌ ನಂ. 23ರ ನಗರಪಾಲಿಕೆ ಸದಸ್ಯೆ ಹಾಗೂ ಮೇಯರ್‌ ಭಾಗ್ಯವತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬಡಾವಣೆ ವೀಕ್ಷಿಸಿದ ಅವರು ಸಾರ್ವಜನಿಕರಿಂದ ದೂರು ಸ್ವೀಕರಿಸಿದರು. ಬಡಾವಣೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ತೆರವುಗೊಳಿಸುತ್ತಿಲ್ಲ. ಅಲ್ಲದೇ, ಈ ಕಸವು ಚರಂಡಿಗೆ ಸಿಲುಕುತ್ತಿದ್ದು, ಮಳೆನೀರು ಸರಾಗವಾಗಿ ಹರಿಯದೇ ತೊಂದರೆಯಾಗುತ್ತಿದೆ ಎಂದು ನಾಗರಿಕರು ದೂರಿದರು.

ಇದಕ್ಕೆ ಉತ್ತರಿಸಿದ ಶಾಸಕ ನಾಗೇಂದ್ರ ರಸ್ತೆಗಳಲ್ಲಿರುವ ಕಲ್ಲು–ಮಣ್ಣನ್ನು ಕೂಡಲೇ ತೆರವುಗೊಳಿಸಬೇಕು. ಮೋರಿಗಳಲ್ಲಿ ತುಂಬಿರುವ ಕಸವನ್ನು ತೆಗೆಸಬೇಕು ಎಂದು ಸ್ಥಳದಲ್ಲೇ ಇದ್ದ ನಗರಪಾಲಿಕೆಯ ಆರೋಗ್ಯ ಅಧಿಕಾರಿಗೆ ಸೂಚನೆ ನೀಡಿದರು.

ADVERTISEMENT

ಬಡಾವಣೆಯಲ್ಲಿ ಯು, ಎಲ್‌ ಹಾಗೂ ಬಾಕ್ಸ್‌ ಮಾದರಿ ಮೋರಿಗಳಿದ್ದರೂ ಅವುಗಳು ಬಳಕೆಗೆ ಯೋಗ್ಯವಿಲ್ಲ. ಸಾರ್ವಜನಿಕರು ಮನೆಯ ಹಿಂದಿನ ಗಲ್ಲಿಗಳನ್ನು ಒತ್ತುವರಿ ಮಾಡಿಕೊಂಡಿರುವ ಕಾರಣ ಒಳಚರಂಡಿ ಸಮಸ್ಯೆ ಎದುರಾಗಿದೆ ಎಂದು ನಾಗರಿಕರು ಆರೋಪಿಸಿದರು. ಈ ಕುರಿತು ಕೂಡಲೇ ಕ್ರಮ ವಹಿಸುವಂತೆ ನಾಗೇಂದ್ರ ತಿಳಿಸಿದರು.

ಬಡಾವಣೆಯಲ್ಲಿ 5 ಉದ್ಯಾನಗಳಿದ್ದು ಅಭಿವೃದ್ಧಿಯಾಗಿಲ್ಲ. ಇಲ್ಲಿನ ಹಾಪ್‌ಕಾಮ್ಸ್‌ ಮಳಿಗೆ ಪಾಳು ಬಿದ್ದಿದ್ದು ತಂಟೆ ಕೋರರ ತಾಣವಾಗಿದೆ. ಸಮೀಪದ ರಸ್ತೆಗಳಲ್ಲಿ ವಿದ್ಯುತ್‌ ಕಂಬಗಳು ಮುರಿದಿದ್ದು ಬೀಳುವ ಹಂತದಲ್ಲಿವೆ. ಇವನ್ನು ಕೂಡಲೇ ಸರಿಪಡಿಸುವಂತೆ ನಾಗರಿಕರು ಕೋರಿದರು.

ನಂತರ ಮಾತನಾಡಿದ ನಾಗೇಂದ್ರ, ‘ನಾಗರಿಕರ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲಾಗುವುದು. ನಾಗರಿಕರು ತಮ್ಮ ಸಮಸ್ಯೆಗಳನ್ನು ನನ್ನ ಬಳಿ ಮುಕ್ತವಾಗಿ ಹಂಚಿಕೊಳ್ಳಬಹುದು. ನನ್ನ ಕಚೇರಿಗೆ ಮಾಹಿತಿ ನೀಡಬಹುದು. ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಸಮಸ್ಯೆ ಪರಿಹರಿಸುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.