ADVERTISEMENT

ಮೈಸೂರು | ಪಾರಂಪರಿಕ ಸಂಗೀತೋತ್ಸವ: ಬೆಂಗಳೂರು ಸೋದರರ ‘ಸ್ವರವಿಹಾರ’

ಮೋಹನ್‌ ಕುಮಾರ್‌ ಸಿ.
Published 4 ಸೆಪ್ಟೆಂಬರ್ 2025, 3:17 IST
Last Updated 4 ಸೆಪ್ಟೆಂಬರ್ 2025, 3:17 IST
ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ಶ್ರೀ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌ (ಎಸ್‌ಪಿವಿಜಿಎಂಸಿ), ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಸಹಯೋಗದಲ್ಲಿ ಆಯೋಜಿಸಿರುವ 64ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಬುಧವಾರ ವಿದ್ವಾನ್‌ ಅಶೋಕ್‌ ಮತ್ತು ವಿದ್ವಾನ್ ಹರಿಹರನ್‌ ಅವರ ‘ದ್ವಂದ್ವ ಗಾಯನ’ ಲಹರಿ –ಪ್ರಜಾವಾಣಿ ಚಿತ್ರ 
ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ಶ್ರೀ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌ (ಎಸ್‌ಪಿವಿಜಿಎಂಸಿ), ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಸಹಯೋಗದಲ್ಲಿ ಆಯೋಜಿಸಿರುವ 64ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಬುಧವಾರ ವಿದ್ವಾನ್‌ ಅಶೋಕ್‌ ಮತ್ತು ವಿದ್ವಾನ್ ಹರಿಹರನ್‌ ಅವರ ‘ದ್ವಂದ್ವ ಗಾಯನ’ ಲಹರಿ –ಪ್ರಜಾವಾಣಿ ಚಿತ್ರ    

ಮೈಸೂರು: ವಿದ್ವಾನ್‌ ಅಶೋಕ್‌ ಮತ್ತು ವಿದ್ವಾನ್ ಹರಿಹರನ್‌ ಅವರ ‘ದ್ವಂದ್ವ ಗಾಯನ’ ಲಹರಿಯು ಸಂಗೀತ ಪ್ರಿಯರ ಮನಸೂರೆಗೊಂಡಿತು. ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ನಡೆಯುತ್ತಿರುವ 64ನೇ ಪಾರಂಪರಿಕ ಸಂಗೀತೋತ್ಸವದಲ್ಲಿ ಸಹೃದಯರು ಬೆಂಗಳೂರು ಸಹೋದರರ ‘ಸ್ವರವಿಹಾರ’ದಲ್ಲಿ ವಿಹರಿಸಿದರು. 

‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಆಯೋಜಿಸಲಾಗಿರುವ ಸಂಗೀತೋತ್ಸವದ 8ನೇ ದಿನ ‘ಕರ್ನಾಟಕ ಸಂಗೀತ’ ಗಾಯನ ಸುಧೆಯು ಎಲ್ಲರ ಕಿವಿದುಂಬಿತ್ತು.  

ಮೈಸೂರು ವಾಸುದೇವಾಚಾರ್ಯರ ಗಣಪತಿ ವರ್ಣದೊಂದಿಗೆ ಕಛೇರಿ ಆರಂಭಿಸಿದ ಅವರು, ನಾರಾಯಣ ತೀರ್ಥರ ‘ಮೋಹನ’ ರಾಗದ ಕೃತಿ ‘ಜಯಜಯಸ್ವಾಮಿನ್’ ಹಾಡಿ ನಾನಾ ಹೆಸರುಗಳಿಂದ ಗಣೇಶನ ಗುಣಗಾನ ಮಾಡಿದರು.  

ADVERTISEMENT

ಶ್ಯಾಮಶಾಸ್ತ್ರೀ ಅವರ ‘ಗಾಯಕಪ್ರಿಯ’ ಅಥವಾ ‘ಕಾಲ್ಕಡ’ ರಾಗದ ಕೃತಿ  ‘ಪಾರ್ವತಿ ನಿನ್ನು ನೇ’ ಕೃತಿ ‍ಪ್ರಸ್ತುತ ಪಡಿಸಿದರು. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಾಸುದೇವಾಚಾರ್ಯರ ‘ಪುಷ್ಪಲತಿಕಾ’ ರಾಗದ ‘ಗುರುಕೃಪಾ’ ಕೃತಿ‌ ಹಾಡಿ ಶಿಷ್ಯನ ಏಳ್ಗೆಯಲ್ಲಿ ಗುರುವಿನ ಕಾಣ್ಕೆಯನು ಕೇಳುಗರ ಸ್ಮೃತಿಗೆ ತಂದರು. 

‘ಕೇದಾರ ಗೌಳ’ ರಾಗಾಲಾಪನೆ ಮಾಡಿದ ಸಹೋದರರು, ವಯಲಿನ್ ವಾದಕ‌ ವಿಠ್ಠಲ ರಾಮಮೂರ್ತಿ ಅವರಿಗೆ ರಾಗ ವಿಸ್ತರಣೆಗೆ ಅವಕಾಶ ನೀಡಿದರು. ನಂತರ ಇದೇ ರಾಗದಲ್ಲಿನ ತ್ಯಾಗರಾಜರ ಕೃತಿ ‘ವೇಣು ಗಾನ ಲೋಲುನೀ’ ಹಾಡಿದಾಗ ‘ರೂಪಕ ತಾಳ’ದಲ್ಲಿ ಬೆಂಗಳೂರು ಪ್ರವೀಣ್ ಮೋಡಿ ಮಾಡಿದರು. ಮಂದ್ರ ಹಾಗೂ ತಾರ ಸ್ಥರದ ಪೆಟ್ಟುಗಳಿಂದ ತಲೆದೂಗಿಸಿದರು. ಅವರಿಗೆ ‘ಘಟಂ’ನಲ್ಲಿ ವಿದ್ವಾನ್ ವಾಜಪಲ್ಲಿ ಕೃಷ್ಣಕುಮಾರ್ ಸಾಥ್ ನೀಡಿದರು. ಇಬ್ಬರ ಲಯವಾದ್ಯದ ಸ್ಪರ್ಧೆಯು ಅಂಗಳದಲ್ಲಿದ್ದವರ ಮನಕುಣಿಸಿತು.

ಪುರಂದರದಾಸರ ‘ಕಲ್ಯಾಣಿ’ ರಾಗದ ಕೀರ್ತನೆ ‘ದಯಮಾಡೊ ರಂಗ’, ‘ಕಾಪಿ’ ರಾಗದ ‘ಜಗದೋದ್ಧಾರನ’, ತ್ಯಾಗರಾಜರ ‘ಕಾಪಿ ನಾರಾಯಣಿ’ ರಾಗದ ಕೃತಿ ‘ಸರಸ ಸಾಮದಾನ’ ಹಾಡಿದರು. ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ‘ಶ್ರೀ ಹನುಮಾನ್‌, ಜೈ ಹನುಮಾನ್’ ಸಂಯೋಜನೆಯನ್ನು ಪ್ರಸ್ತುತಪಡಿಸಿದರು. 

ಗಾಯನದೊಂದಿಗೆ ವಾದ್ಯಕಾರರಿಗೂ ಪ್ರತಿಭೆ ತೋರುವ ‘ಕಾಲ’ವನ್ನು ನೀಡಿದ ಸಹೋದರರು, ಸಮಷ್ಟಿ ಭಾವವನ್ನು ಮೂಡಿಸಿದರು. ಎದುರು ಕುಳಿತಿದ್ದ ಮಕ್ಕಳು, ಚಿಣ್ಣರು, ಯುವಕ– ಯುವತಿಯರು ತಾಳ ಹಾಕುತ್ತಾ ಸಂಗೀತದ ರುಚಿಯನ್ನು ಆಸ್ವಾದಿಸಿದರು.   

ಅಭಿಷೇಕ್‌ ಗಾಯನ ಇಂದು 
ಸೆ.4ರ ಶನಿವಾರ ಸಂಜೆ 6.45ಕ್ಕೆ ವಿದ್ವಾನ್‌ ಅಭಿಷೇಕ್‌ ರಘುರಾಮ್‌ ಅವರ ಗಾಯನವಿದೆ. ಕೊಳಲಿನಲ್ಲಿ ಶೃತಿಸಾಗರ್  ಮೃದಂಗದಲ್ಲಿ ವಿದ್ವಾನ್‌ ಸುಮೇಶ್‌ ನಾರಾಯಣ್‌ ಹಾಗೂ ಘಟಂನಲ್ಲಿ ವಿದ್ವಾನ್‌ ವಾಜಪಲ್ಲಿ ಕೃಷ್ಣಕುಮಾರ್ ಸಾಥ್‌ ನೀಡಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.