ADVERTISEMENT

ಶೌಚಾಲಯ ಶುಚಿಗೊಳಿಸಿ; ಗ್ರಂಥಾಲಯ ತೆರೆಸಿ: ಕಾಲೇಜಿನ ವಿದ್ಯಾರ್ಥಿನಿಯರ ಅಳಲು

ಉಪಮುಖ್ಯಮಂತ್ರಿ ಮುಂದೆ ಮಹಾರಾಣಿ ಕಲಾ–ವಿಜ್ಞಾನ ಕಾಲೇಜು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 13:34 IST
Last Updated 20 ಸೆಪ್ಟೆಂಬರ್ 2019, 13:34 IST
ಮಹಾರಾಣಿ ಕಾಲೇಜಿನ ಗ್ರಂಥಾಲಯಕ್ಕೆ ಬೀಗ ಹಾಕಿ ಸೀಲ್‌ ಮಾಡಿರುವುದನ್ನು ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವಥನಾರಾಯಣಗೆ ತೋರಿಸಿದ ಶಾಸಕ ಎಲ್.ನಾಗೇಂದ್ರ
ಮಹಾರಾಣಿ ಕಾಲೇಜಿನ ಗ್ರಂಥಾಲಯಕ್ಕೆ ಬೀಗ ಹಾಕಿ ಸೀಲ್‌ ಮಾಡಿರುವುದನ್ನು ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವಥನಾರಾಯಣಗೆ ತೋರಿಸಿದ ಶಾಸಕ ಎಲ್.ನಾಗೇಂದ್ರ   

ಮೈಸೂರು: ‘ಶೌಚಾಲಯದೊಳಗೆ ಹೋಗಲು ಸಾಧ್ಯವಿಲ್ಲದಂತಹ ಅಸಹ್ಯಕರ ವಾತಾವರಣವಿದೆ. ಮುಚ್ಚಿರುವ ಕ್ಯಾಂಟೀನ್‌, ಸೀಲ್‌ ಮಾಡಿರುವ ಗ್ರಂಥಾಲಯದ ಬೀಗ ತೆರವುಗೊಳಿಸಿ... ಕಾಲೇಜಿಗೆ ಆವರಣಗೋಡೆ ನಿರ್ಮಿಸಿಕೊಡಿ... ನಮಗೂ ಲ್ಯಾಪ್‌ಟಾಪ್‌ ಒದಗಿಸಿ...’

ಕಾಲೇಜಿಗೆ ಶುಕ್ರವಾರ ಭೇಟಿ ನೀಡಿದ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಸಿ.ಎನ್‌.ಅಶ್ವಥ್‌ನಾರಾಯಣಗೆ ಮೈಸೂರಿನ ಶತಮಾನದ ಐತಿಹ್ಯ ಹೊಂದಿರುವ ಮಹಾರಾಣಿ ಮಹಿಳಾ ಕಲಾ ಹಾಗೂ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಸಲ್ಲಿಸಿದ ಒಕ್ಕೊರಲ ಬೇಡಿಕೆಯಿದು.

ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪಲ್ಲವಿ ಹೇಳಿದ ಅಹವಾಲುಗಳಿಗೆ ಶಾಸಕ ಎಲ್‌.ನಾಗೇಂದ್ರ ಸಹ ದನಿಗೂಡಿಸಿದರು. ಶೌಚಾಲಯದ ಸಮಸ್ಯೆ ಬಗ್ಗೆ ಪ್ರಾಂಶುಪಾಲರನ್ನು ವಿಚಾರಿಸಿ, ಈ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಡಿಸಿಎಂ ಸೂಚಿಸಿದರು.

ADVERTISEMENT

ಸಭೆಯಲ್ಲೇ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮೊಬೈಲ್‌ ಕರೆ ಮಾಡುವಂತೆ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಆರ್.ಮೂಗೇಶಪ್ಪ ಅವರಿಗೆ ಡಿಸಿಎಂ ಸೂಚಿಸಿದರು. ನಂತರ ಮೆಲುದನಿಯಲ್ಲೇ ಆಯುಕ್ತರೊಂದಿಗೆ ಮಾತನಾಡಿದರು.

ವಿದ್ಯಾರ್ಥಿನಿಯೊಬ್ಬಳು ಈ ಸಂದರ್ಭ ಲ್ಯಾಪ್‌ಟಾಪ್‌ ಕೊಟ್ಟರೇ ಅಂಗೈನಲ್ಲೇ ಪ್ರಪಂಚ ಇರಲಿದೆ. ವಿದ್ಯಾಭ್ಯಾಸಕ್ಕಷ್ಟೇ ಬಳಸಿಕೊಳ್ಳುತ್ತೇವೆ. ನಾವೆಲ್ಲಾ ಬಡವರ ಮಕ್ಕಳು. ಎಲ್ಲರಿಗೂ ಲ್ಯಾಪ್‌ಟಾಪ್‌ ಒದಗಿಸಿ ಎಂದು ಮತ್ತೊಮ್ಮೆ ಉಪಮುಖ್ಯಮಂತ್ರಿಗೆ ಮನವಿ ಮಾಡಿದರು.

ಶಿಕ್ಷಣಕ್ಕೆ ಆದ್ಯತೆ: ಡಿಸಿಎಂ

‘ಶಿಕ್ಷಣಕ್ಕೆ ಮೊದಲ ಆದ್ಯತೆ. 400ಕ್ಕೂ ಹೆಚ್ಚು ಕಾಲೇಜುಗಳು ಚಿಂತಾಜನಕ ಸ್ಥಿತಿಯಲ್ಲಿವೆ. ಉಳಿದವು ಪರವಾಗಿಲ್ಲ. ಮೂಲ ಸೌಕರ್ಯ ಒದಗಿಸುವ ಜತೆಗೆ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳುವೆ’ ಎಂದು ಅಶ್ವಥನಾರಾಯಣ ತಿಳಿಸಿದರು.

‘ಗುಣಮಟ್ಟದಲ್ಲಿ ನಾವು ಸಾಕಷ್ಟು ಹಿಂದುಳಿದಿದ್ದೇವೆ. ಎಲ್ಲರ ಜತೆಗೂಡಿ ನಿರ್ದಿಷ್ಟ ಗುರಿ ತಲುಪಬೇಕಿದೆ. ಮೈಸೂರು ರಾಜ್ಯಕ್ಕೆ ಮಾದರಿಯಾಗಿದೆ. ಕಾಲೇಜುಗಳಿಂದಲೇ ಐಟಿ–ಬಿಟಿ ಕಂಪನಿಗಳೊಟ್ಟಿಗೆ ವಿದ್ಯಾರ್ಥಿಗಳಿಗೆ ಸಂವಹನ ಏರ್ಪಡಬೇಕಿದೆ’ ಎಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.