ADVERTISEMENT

ಮೈಸೂರಲ್ಲಿ ಸಿ.ಎಂ; ಆಪ್ತರೊಂದಿಗೆ ಸಭೆ

​ಪ್ರಜಾವಾಣಿ ವಾರ್ತೆ
Published 18 ಮೇ 2019, 20:10 IST
Last Updated 18 ಮೇ 2019, 20:10 IST

ಮೈಸೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಗರದ ಹೋಟೆಲ್‌ನಲ್ಲಿ ತಂಗಿದ್ದು, ಜಿಲ್ಲೆಯ ಸಚಿವರು ಹಾಗೂ ಆಪ್ತರೊಂದಿಗೆ ಶನಿವಾರ ಸಭೆ ನಡೆಸಿದರು.

‘ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ’ ಎಂಬ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆಯಿಂದ ಉಂಟಾಗಬಹುದಾದ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಆಪ್ತರೊಂದಿಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ವಿಧಾನ ಪರಿಷತ್‌ ಸದಸ್ಯ ಬೋಜೇಗೌಡ ಇದ್ದರು. ಆದರೆ, ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದರು.

ADVERTISEMENT

ಹೊರಟ್ಟಿ ಹೇಳಿಕೆ ಕುರಿತು ಮುಖ್ಯಮಂತ್ರಿ ಈಗಾಗಲೇ ಟ್ವೀಟ್‌ ಕೂಡ ಮಾಡಿದ್ದಾರೆ. ‘ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯಾಗುವ ಹೊಸ್ತಿಲಲ್ಲಿ ನಾವೆಲ್ಲ ಇದ್ದೇವೆ. ಇಂಥ ಸಮಯದಲ್ಲಿ ಜೆಡಿಎಸ್, ಕಾಂಗ್ರೆಸ್ ನಾಯಕರು ವ್ಯತಿರಿಕ್ತ ಹೇಳಿಕೆಗಳನ್ನು ನೀಡಬಾರದು’ ಎಂದಿದ್ದಾರೆ.

ಮೈಸೂರು ಭೇಟಿ: ಕುಟುಂಬ ಸಮೇತ ತಿರುಪತಿಗೆ ಹೋಗಿದ್ದ ಕುಮಾರಸ್ವಾಮಿ ಅವರು ಅಲ್ಲಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಬಂದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಸಾ.ರಾ.ಮಹೇಶ್‌, ಜಿ.ಟಿ.ದೇವೇಗೌಡರು ಸ್ವಾಗತಿಸಿದರು. ಈ ಮೊದಲು ನಿಗದಿಯಾದ ಕಾರ್ಯಕ್ರಮ ಪಟ್ಟಿ ಪ್ರಕಾರ ಬೆಂಗಳೂರಿನಿಂದ ಮೈಸೂರಿಗೆ ರಸ್ತೆ ಮಾರ್ಗದಲ್ಲಿ ಬರಬೇಕಿತ್ತು. ಭಾನುವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ತೆರಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.