ADVERTISEMENT

‘₹25 ಕೋಟಿಗೆ ನನ್ನನ್ನು ಖರೀದಿಸಿದ ವ್ಯಕ್ತಿಯೊಂದಿಗೆ ಚಾಮುಂಡಿ ಸನ್ನಿಧಿಗೆ ಬನ್ನಿ’

ಜೆಡಿಎಸ್ ಶಾಸಕ ಸಾ.ರಾ.ಮಹೇಶ್‌ಗೆ ಪಂಥಾಹ್ವಾನ ನೀಡಿದ ಅನರ್ಹ ಶಾಸಕ ಎಚ್.ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 12:14 IST
Last Updated 15 ಅಕ್ಟೋಬರ್ 2019, 12:14 IST
   

ಮೈಸೂರು: ‘ನಾನು ₹ 25 ಕೋಟಿಗೆ ಮಾರಾಟವಾಗಿದ್ದೇನೆ ಎಂದು ಹೇಳುತ್ತಿದ್ದೀರಿ. ಗುರುವಾರ (ಅ.17) ಬೆಳಿಗ್ಗೆ 9 ಗಂಟೆಗೆ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಬರುವೆ. ನೀವೂ ಸಹ ನನ್ನನ್ನು ಕೊಂಡುಕೊಂಡಿರುವ ವ್ಯಕ್ತಿಯೊಟ್ಟಿಗೆ ಬನ್ನಿ. ಸತ್ಯ ಸಾಬೀತುಪಡಿಸಿ’ ಎಂದು ಅನರ್ಹ ಶಾಸಕ ಅಡಗೂರು ಎಚ್‌.ವಿಶ್ವನಾಥ್‌, ಜೆಡಿಎಸ್ ಶಾಸಕ ಸಾ.ರಾ.ಮಹೇಶ್‌ಗೆ ಪಂಥಾಹ್ವಾನ ನೀಡಿದರು.

‘ವೈಯಕ್ತಿಕ ತಿಕ್ಕಾಟ, ಕೆಸರೆರಚಾಟ ಬೇಡ ಎಂದು ಸುಮ್ಮನಿದ್ದೆ. ಉಪಚುನಾವಣೆಯಲ್ಲಿ ಇದನ್ನೇ ಹೇಳಿಕೊಂಡು ಓಡಾಡ್ತೀರಿ. ಕೊಚ್ಚೆಗುಂಡಿಗೆ ಕಲ್ಲು ಎಸೆಯೋದು ಬೇಡ ಎಂದು ಸ್ನೇಹಿತರು ಹೇಳಿದರು. ಆದರೆ ಪದೇ ಪದೇ ನಿಮ್ಮ ಸುಳ್ಳು ದೂರಿನಿಂದ ನೊಂದಿರುವೆ. ನಾಲ್ಕು ದಶಕದ ರಾಜಕಾರಣದಲ್ಲಿ ನಾನು ಏನೆಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಮಂಗಳವಾರ ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾ.ರಾ.ವಿರುದ್ಧ ಕಿಡಿಕಾರಿದರು.

‘ಕಾಂಗ್ರೆಸ್‌–ಜೆಡಿಎಸ್ ಸಮ್ಮಿಶ್ರ ಸರ್ಕಾರದ ದೌರ್ಜನ್ಯದ ವಿರುದ್ಧ 17 ಶಾಸಕರು ರಾಜೀನಾಮೆ ನೀಡಿದ್ದಾರೆ. ಒಬ್ಬೊಬ್ಬರು ಕೋಟಿ ಕೋಟಿ ತೂಗುವವರೇ ಇದ್ದಾರೆ. ದುಡ್ಡು ತೆಗೆದುಕೊಂಡವರು ಯಾರೂ ಇಲ್ಲ. ರಾಜಕಾರಣದ ಇಂದಿನ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಬದುಕಲು ಯತ್ನಿಸುತ್ತಿರುವವರ ಪಟ್ಟಿಯಲ್ಲಿ ನಾನು ಒಬ್ಬನಿದ್ದೇನೆ’ ಎಂದು ಹೇಳಿಕೊಂಡರು.

ADVERTISEMENT

‘ನಿಮ್ಮ ಆಣೆ–ಪ್ರಮಾಣವನ್ನು ಈಗ ಯಾರು ನಂಬುತ್ತಾರೆ. ನಿಮ್ಮ ಮಾತಿನಂತೆ ನಡೆದುಕೊಳ್ಳೋದಾದರೆ ಪ್ರತಿಯೊಬ್ಬ ರಾಜಕಾರಣಿ ನಿತ್ಯವೂ ನೂರಾರು ಪ್ರಮಾಣ ಮಾಡಿಕೊಂಡು ಓಡಾಡಬೇಕಾಗುತ್ತದೆ. ನನ್ನನ್ನು ಖರೀದಿಸಿದವನನ್ನು ಚಾಮುಂಡಿ ಸನ್ನಿಧಿಗೆ ಕರೆ ತಂದು ನಿಮ್ಮ ಆರೋಪ ಸಾಬೀತುಪಡಿಸಿ’ ಎಂದು ಸಾ.ರಾ.ಮಹೇಶ್‌ ದೂರಿಗೆ ವಿಶ್ವನಾಥ್ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.