ADVERTISEMENT

ಮೈಸೂರು: ಪುರಸಭೆಗೆ ಸೇರಿದ 4ವಾಣಿಜ್ಯ ಮಳಿಗೆಗಳ ಮೇಲ್ಛಾವಣಿ ಕುಸಿತ, ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 12:36 IST
Last Updated 16 ಆಗಸ್ಟ್ 2024, 12:36 IST
ಕೆ.ಆರ್.ನಗರ ಗರುಡಗಂಬ ವೃತ್ತದಲ್ಲಿ ಕುಸಿದು ಬಿದ್ದಿರುವ ಪುರಸಭೆಗೆ ಸೇರಿರುವ ವಾಣಿಜ್ಯ ಮಳಿಗೆಗಳ ಮೇಲ್ಛಾವಣಿ
ಕೆ.ಆರ್.ನಗರ ಗರುಡಗಂಬ ವೃತ್ತದಲ್ಲಿ ಕುಸಿದು ಬಿದ್ದಿರುವ ಪುರಸಭೆಗೆ ಸೇರಿರುವ ವಾಣಿಜ್ಯ ಮಳಿಗೆಗಳ ಮೇಲ್ಛಾವಣಿ   

ಕೆ.ಆರ್.ನಗರ: ಇಲ್ಲಿನ ಗರುಡಗಂಬ ವೃತ್ತದಲ್ಲಿ ಈಚೆಗೆ ಪುರಸಭೆಗೆ ಸೇರಿರುವ 4 ವಾಣಿಜ್ಯ ಮಳಿಗೆಗಳ ಮುಂಭಾಗದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

20 ವರ್ಷಗಳ ಹಿಂದೆ ಪುರಸಭೆಯಿಂದ 23 ವಾಣಿಜ್ಯ ಮಳಿಗೆ ನಿರ್ಮಿಸಿ ಮಾಸಿಕ ಬಾಡಿಗೆಗೆ ನೀಡಲಾಗಿತ್ತು. ಎಚ್‌ಕೆಜಿಎನ್ ಹೋಟೆಲ್, ಉದಯ ಬುಕ್ ಸ್ಟೊರ್, ವಿನಾಯಕ ಭಂಡಾರ್, ಎಸ್.ಕೆ.ಐಯ್ಯಂಗಾರ್ ಕೇಕ್ ಪ್ಯಾಲೇಸ್ ಮತ್ತು ಸಿಡಿಎಸ್ ಏಜೆನ್ಸಿ ವಾಣಿಜ್ಯ ಮಳಿಗೆಗಳ ಮುಂಭಾಗದ ಮೇಲ್ಛಾವಣಿಯ ‘ಮುಂಚೆ ಆಚು’ ಕಳಚಿ ಬಿದ್ದಿದೆ. ಪರಿಣಾಮ ಮಳಿಗೆಗಳ ಮುಂಭಾಗ ಹಾಕಲಾದ ನಾಮಫಲಕಗಳು ನೆಲಕ್ಕೆ ಉರುಳಿ ಬಿದ್ದಿದ್ದು, ಯಾವುದೇ ಹಾನಿಯಾಗಿಲ್ಲ. ಇದರಿಂದ ಅಪಾಯ ತಪ್ಪಿದಂತಾಗಿದೆ.

ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ವ್ಯಕ್ತಿಯೊಬ್ಬರು ಬಂದು ಮಳಿಗೆಗಳ ಅಪಾಯದ ಮುನ್ಸೂಚನೆ ನೀಡಿದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು. ಕಟ್ಟಡ ಅಪಾಯದಲ್ಲಿ ಇರುವುದದನ್ನು ಕಂಡು ಅಲ್ಲಿನ ಎಲ್ಲ ಮಳಿಗೆದಾರರಿಗೆ ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಿದ್ದೆ. ಎಚ್ಚರಿಕೆ ನೀಡಿ ಬಂದ ಅರ್ಧ ಗಂಟೆಯಲ್ಲಿಯೇ ಮೇಲ್ಛಾವಣಿ ಕುಸಿದು ಬಿದ್ದಿದೆ. ಹಳೇ ಕಟ್ಟಡಕ್ಕೆ ಮಳಿಗೆದಾರರು ತಮಗೆ ಬೇಕಾದಂತೆ ಮಾರ್ಪಾಡು ಮಾಡಿಕೊಂಡಿದ್ದರಿಂದ ಮತ್ತು ಮುಂಚೆ ಆಚು ಮೇಲ್ಛಾವಣಿ ಮೇಲೆ ದೊಡ್ಡ ಗಾತ್ರದ ಜಾಹೀರಾತು ನಾಮಫಲಕ ಹಾಕಿದ್ದೆ ಇದಕ್ಕೆ ಕಾರಣವಾಗಿದೆ’ ಎಂದು ಹೇಳಿದರು.

ADVERTISEMENT

‘ಶಾಸಕ ಡಿ.ರವಿಶಂಕರ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅದೊಂದು ಅಪಾಯಕಾರಿ ಕಟ್ಟಡವಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಮುಂದಿನ ಕ್ರಮ ತೆಗೆದುಕೊಳ್ಳುವವರೆಗೆ ಇಲ್ಲಿನ ಉಳಿಕೆ ಎಲ್ಲ 19 ವಾಣಿಜ್ಯ ಮಳಿಗೆಗಳು ತೆರೆಯದಂತೆ, ಇಲ್ಲಿ ವ್ಯಾಪಾರ ವಹಿವಾಟು ಮಾಡದಂತೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.