ADVERTISEMENT

ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಾದರೆ ರಾಜಕೀಯ ಶಕ್ತಿ: ಸಂತೋಷ್ ಲಾಡ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 2:47 IST
Last Updated 1 ಸೆಪ್ಟೆಂಬರ್ 2025, 2:47 IST
ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ನಡೆದ ‘ನುಲಿಯ ಚಂದಯ್ಯ’ ಜಯಂತಿಯನ್ನು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಉದ್ಘಾಟಿಸಿದರು
ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ನಡೆದ ‘ನುಲಿಯ ಚಂದಯ್ಯ’ ಜಯಂತಿಯನ್ನು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಉದ್ಘಾಟಿಸಿದರು   

ಮೈಸೂರು: ‘ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ಬದಿಗೊತ್ತಿ ಸಮುದಾಯ ಒಗ್ಗಟ್ಟಾದರೆ ಮಾತ್ರ ರಾಜಕೀಯ ಶಕ್ತಿ ಸಿಗುತ್ತದೆ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದರು. 

ನಗರದ ಕಲಾಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ ಆಯೋಜಿಸಿದ್ದ ‘ನುಲಿಯ ಚಂದಯ್ಯ’ ಜಯಂತಿ ಉದ್ಘಾಟಿಸಿ ಮಾತನಾಡಿ, ‘ಅಲೆಮಾರಿ ಸಮುದಾಯಗಳ ಕೂಗಿಗೆ ಸರ್ಕಾರವು ಸ್ಪಂದಿಸಲಿದೆ. ಎಲ್ಲ ಶಾಸಕರು ಸಮುದಾಯದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು’ ಎಂದರು. 

‘ಕೊರಮ, ಕೊರಚ ಸೇರಿದಂತೆ ತಳ ಸಮುದಾಯದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಐ‍ಎಎಸ್‌, ಕೆಎಎಸ್‌ ಅಂಥ ನಾಗರಿಕ ಸೇವೆಗಳಿಗೆ ಹೋಗಬೇಕು. ಶೋಷಿತ ಸಮುದಾಯಗಳ ಜೊತೆ ಎಂದಿಗೂ ಸರ್ಕಾರ ಬೆಂಬಲವಾಗಿ ನಿಂತಿದೆ’ ಎಂದು ಹೇಳಿದರು. 

ADVERTISEMENT

‘ಪರಿಶಿಷ್ಟರು ಮತ್ತು ಹಿಂದುಳಿದ ಸಮುದಾಯಗಳಿಗೆ ಕಾರ್ಮಿಕ ಇಲಾಖೆ ಬೆಂಬಲವಾಗಿ ನಿಂತಿದೆ. ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ನೀಡಿ ಎಲ್ಲ ಸೇವೆಗಳನ್ನು ತಲುಪುವಂತೆ ಮಾಡಲಾಗಿದೆ’ ಎಂದರು. 

ಲೇಖಕ ವಿ.ಕಿರಣ್‌ಕುಮಾರ್ ಕೊತ್ತಗೆರೆ ಮಾತನಾಡಿ, ‘ಕೊರಮ, ಕೊರಚರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಸಮುದಾಯಗಳಿಂದ ಒಬ್ಬ ಶಾಸಕರೂ ಇಲ್ಲ. ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಅಪರಾಧಿ ಬುಡಕಟ್ಟುಗಳೆಂದು ಸಮುದಾಯದ ಅಸ್ತಿತ್ವ ಇಲ್ಲದಂತೆ ಮಾಡಿದ್ದರು. ಇಂದಿಗೂ ಸೂರು, ಉದ್ಯೋಗವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ವಿಧಾನಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಸಿ.ಎನ್‌.ಮಂಜೇಗೌಡ, ಶಾಸಕ ಅನಿಲ್ ಚಿಕ್ಕಮಾದು, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜ್‌, ಶ್ರೀಕಂಠ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಸಮಾಜದ ಮುಖಂಡರಾದ ಡಿ.ಎನ್.ಮುತ್ತುರಾಜು, ಪಿ.ನಾಗರಾಜ್, ವೇದಾವತಿ, ಕೆ.ಹೆಚ್.ಸತ್ಯನಾರಾಯಣ, ಪುಟ್ಟಸ್ವಾಮಿ, ಶಿವಕುಮಾರ್, ಮಹದೇವ , ಟಿ.ಪುರುಷೋತ್ತಮ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.