ADVERTISEMENT

ಉನ್ನತ ಹುದ್ದೆಯ ಗುರಿಯಿರಲಿ: ವಿದ್ಯಾರ್ಥಿಗಳಿಗೆ ರವಿ ಡಿ. ಚನ್ನಣ್ಣವರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:56 IST
Last Updated 14 ಆಗಸ್ಟ್ 2025, 6:56 IST
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು ಆಯೋಜಿಸಿರುವ ಯುಜಿಸಿ ನೆಟ್‌/ ಕೆ ಸೆಟ್‌ ತರಬೇತಿ ಶಿಬಿರದಲ್ಲಿ ರವಿ ಡಿ. ಚನ್ನಣ್ಣವರ್‌ ಮಾತನಾಡಿದರು
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು ಆಯೋಜಿಸಿರುವ ಯುಜಿಸಿ ನೆಟ್‌/ ಕೆ ಸೆಟ್‌ ತರಬೇತಿ ಶಿಬಿರದಲ್ಲಿ ರವಿ ಡಿ. ಚನ್ನಣ್ಣವರ್‌ ಮಾತನಾಡಿದರು   

ಮೈಸೂರು: ‘ಉತ್ತಮ ಸಮಾಜ ಕಟ್ಟುವ ಕನಸು ಹೊಂದಿದ್ದವರಿಗೆ ಉನ್ನತ ಹುದ್ದೆ ಪಡೆಯುವ ಗುರಿ ಅವಶ್ಯ’ ಎಂದು ಬೆಂಗಳೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಐಜಿ ರವಿ ಡಿ. ಚನ್ನಣ್ಣವರ್‌ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು ಆಯೋಜಿಸಿದ್ದ ಯುಜಿಸಿ ನೆಟ್‌/ ಕೆ–ಸೆಟ್‌ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. 

‘ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ವೇಳಾಪಟ್ಟಿ ತಯಾರಿಸಿಕೊಳ್ಳುವುದು ಉತ್ತಮ. ಅದಿಲ್ಲದಿದ್ದರೆ ಯಶಸ್ಸು ಅಸಾಧ್ಯ. ಹಿಂದಿನ 10 ವರ್ಷಗಳ ಪ್ರಶ್ನೆಪತ್ರಿಕೆ ಅಧ್ಯಯನ, ಸಾಮಾನ್ಯ ಜ್ಞಾನಕ್ಕಾಗಿ ಪತ್ರಿಕೆ ಓದು ಪರೀಕ್ಷೆಯಲ್ಲಿ ಸಹಾಯ ಮಾಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯು ವಿದ್ಯಾರ್ಥಿಗಳಲ್ಲಿ ಅಡಗಿರುವ ಜ್ಞಾನ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುತ್ತದೆ. ನಿರಂತರವಾದ ಓದು ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ಸಹಾಯಕವಾಗುತ್ತದೆ’ ಎಂದು ಹೇಳಿದರು.

ADVERTISEMENT

ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ‘ಸಾಧನೆ ಮಾಡಲು ತೆರಳುವಾಗ ಅನೇಕ ಏಳು– ಬೀಳುಗಳಿರುತ್ತವೆ. ಅವನ್ನು ದಾಟಿ ಗುರಿ ಸಾಧಿಸಿದಾಗ ಆತ್ಮತೃಪ್ತಿ ಇರುತ್ತದೆ. ಪೂರ್ವ ತಯಾರಿ ಆಧಾರದ ಮೇಲೆ ನಮ್ಮ ಸ್ಥಾನಮಾನ ನಿರ್ಧಾರವಾಗುತ್ತದೆ’
ಎಂದರು.

ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ, ಸಿದ್ದೇಶ್‌ ಹೊನ್ನೂರ್‌, ಗಣೇಶ ಕೆ.ಜಿ ಕೊಪ್ಪಲು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.