ಮೈಸೂರು: ‘ಮುಂದಿನ ಇಪ್ಪತ್ತು ವರ್ಷಗಳಲ್ಲಿ ಭಾರತ ಆರ್ಥಿಕತೆಯಲ್ಲಿ ವಿಶ್ವದ ಇತರೆ ರಾಷ್ಟ್ರಗಳಿಗಿಂತ ಉತ್ತಮ ಪ್ರಗತಿ ಸಾಧಿಸಲಿದೆ’ ಎಂದು ಬೆಂಗಳೂರಿನ ಸಾಮಿ-ಸಬಿನ್ಸಾ ಗ್ರೂಪ್ ನಿರ್ದೇಶಕ ಕೆ. ಉಲ್ಲಾಸ್ ಕಾಮತ್ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ವಿಜಯನಗರದ ಜೆಸಿಎಸಿ ಸಭಾಂಗಣದಲ್ಲಿ ಶುಕ್ರವಾರ ‘ಮೈಸೂರು ವಿಪ್ರ ಪ್ರೊಫೆಷನಲ್ ಫೋರಂ’ ವತಿಯಿಂದ ಆಯೋಜಿಸಿದ್ದ ವಿಪಿಎಫ್ ಬಿಸಿನೆಸ್ ಕಾನ್‌ಕ್ಲೇವ್‌ನಲ್ಲಿ ಅವರು ಮಾತನಾಡಿದರು.
‘ದೇಶದ ಜನಸಂಖ್ಯೆಯ ಶೇ.25ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದ್ದರೂ ಅಮೆರಿಕದ ಆರ್ಥಿಕತೆ ಉತ್ತಮವಾಗಿದೆ. ನಂತರದ ಸ್ಥಾನದಲ್ಲಿ ಚೀನಾ, ಜಪಾನ್ ಹಾಗೂ ಭಾರತ ಇದೆ. ನಮ್ಮ ದೇಶ ಆರ್ಥಿಕತೆಯಲ್ಲಿ ವಿಶ್ವದ 4ನೇ ಸ್ಥಾನದಲ್ಲಿದೆ. ಭಾರತ– ಅಮೆರಿಕ ನಡುವಿನ ಸಂಬಂಧ ಉತ್ತಮವಾಗಿರಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ರವಿ ಹೆಗಡೆ ಮಾತನಾಡಿ, ‘ಕೃತಕ ಬುದ್ಧಿಮತ್ತೆ (ಎಐ) ದೊಡ್ಡಮಟ್ಟದ ಪರಿಣಾಮ ಬೀರಲಿದ್ದು, ಇಡೀ ವಿಶ್ವವನ್ನೇ ಬದಲಿಸಲಿದೆ. ಪ್ರಮುಖವಾಗಿ ಎಐನಿಂದ ಬ್ರಾಹ್ಮಣ ಸಮುದಾಯದ ಮೇಲೆ ಗಂಭೀರವಾದ ಪರಿಣಾಮ ಉಂಟಾಗಲಿದೆ. ಬ್ರಾಹ್ಮಣರು ಮಾಡುವ, ಮಂತ್ರ ಹೇಳುವಂತಹ ಕೆಲಸವನ್ನು ಎಐ ಮಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಪಿಎಫ್ ಅಧ್ಯಕ್ಷ ಹಾಗೂ ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ, ‘ಬಡ ಬ್ರಾಹ್ಮಣ, ಬಡ ಪೂಜಾರಿ ಎಂಬ ಪದಗಳನ್ನು ತೆಗೆಯುವ ಪರಿಸ್ಥಿತಿ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ವಿಪಿಎಫ್ ಮೈಸೂರಿನಲ್ಲಿ ತನ್ನ ವಿಂಗ್ ಆರಂಭಿಸಿದೆ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸಮಾರ್ಥ್ ವಿದ್ಯಾ ಮಾತನಾಡಿದರು. ಉದ್ಯಮಿಗಳಾದ ಕೇಶವ್, ಜಿ.ಎಸ್.ಎಸ್.ಎಸ್. ಭರತ್, ಜಯಸಿಂಹ, ವೆಂಕಟೇಶ್, ಭಾಷ್ಯಂ ಎಸ್., ಶ್ರೀನಿವಾಸ್ ವರದರಾಜನ್, ಅನಂತ ನಾಗರಾಜ್, ರಾಧಕೃಷ್ಣ ಎಸ್. ಹಾಗೂ ವಿಪಿಎಫ್ ಸಮಿತಿ ಉಪಾಧ್ಯಕ್ಷರಾದ ಮುರುಳಿ, ಕೆ.ಆರ್. ಸತ್ಯನಾರಾಯಣ್, ಕಾರ್ಯದರ್ಶಿ ಸುಧೀಂದ್ರ ಎ., ಜಂಟಿ ಕಾರ್ಯದರ್ಶಿಗಳಾದ ಶ್ರೀವತ್ಸ ಮಂಜುನಾಥ್, ಸಮರ್ಥ್, ಖಜಾಂಚಿ ಸತ್ಯಪ್ರಕಾಶ್ ಸಿ.ಎಸ್., ನಿರ್ದೇಶಕರಾದ ಚಂದ್ರಶೇಖರ್ ಎಚ್.ಎನ್., ಜಿ.ಎಸ್ ಗಣೇಶ್, ಕಾರ್ತಿಕ್ ಪಂಡಿತ್, ಶಿವಪ್ರಸಾದ್, ಪಿ.ಎಸ್.ನಾರಾಯಣ್ ಡಿ. ಪ್ರಭಕಾರ್ ರಾವ್. ಕೆ, ಸವಿತಾ ಎಲ್, ಶಿವಶಂಕರ್ ಕೆ.ಎಸ್. ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.