ADVERTISEMENT

ಜೀವವಿಮೆ | ರಾಜ್ಯವ್ಯಾಪಿ ವಿಸ್ತರಣೆಗೆ ಕ್ರಮ: ವಿನಯ್ ಕುಮಾರ್ ಸೊರಕೆ ಭರವಸೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 5:28 IST
Last Updated 4 ಜನವರಿ 2026, 5:28 IST
ಮೈಸೂರಿನ ಕಾಂಗ್ರೆಸ್‌ ಭವನದಲ್ಲಿ ಶನಿವಾರ ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತವಾಗಿ ಜೀವವಿಮೆ ಬಾಂಡ್ ಅನ್ನು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ವಿತರಿಸಿದರು. ಸಮಿತಿ ಉಪಾಧ್ಯಕ್ಷ ಕೋಟೆ ಎಂ.ಶಿವಣ್ಣ, ಜಿಲ್ಲಾ ಕಾಂಗ್ರೆಸ್‌ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ಹಾಜರಿದ್ದರು
ಮೈಸೂರಿನ ಕಾಂಗ್ರೆಸ್‌ ಭವನದಲ್ಲಿ ಶನಿವಾರ ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತವಾಗಿ ಜೀವವಿಮೆ ಬಾಂಡ್ ಅನ್ನು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ವಿತರಿಸಿದರು. ಸಮಿತಿ ಉಪಾಧ್ಯಕ್ಷ ಕೋಟೆ ಎಂ.ಶಿವಣ್ಣ, ಜಿಲ್ಲಾ ಕಾಂಗ್ರೆಸ್‌ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ಹಾಜರಿದ್ದರು   

ಮೈಸೂರು: ‘ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತವಾಗಿ ಜೀವವಿಮೆ ಬಾಂಡ್ ವಿತರಿಸುವ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುವುದು’ ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಭರವಸೆ ನೀಡಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ 3ನೇ ಹಂತದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಜೀವವಿಮೆ ಬಾಂಡ್ ವಿತರಣೆ ಹಾಗೂ ಜಿಲ್ಲಾ ಪ್ರಚಾರ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದರು.

‘ಪ್ರತಿ ಲಿಂಗತ್ವ ಅಲ್ಪಸಂಖ್ಯಾತರ ಉದ್ಯೋಗ, ಕೌಶಲಾಭಿವೃದ್ಧಿಗೆ ₹30,000 ಅನುದಾನ ಲಭ್ಯವಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲರಂತೆ ನೀವೂ ಅಭಿವೃದ್ಧಿಯಲ್ಲಿ ಸಮಾನ ಹಕ್ಕುದಾರರು.‌ ಸಮಾಜದಲ್ಲಿ ಈ ಪ್ರಜ್ಞಾವಂತ ಮನಃಸ್ಥಿತಿ ಹೆಚ್ಚಬೇಕು. ಇದಕ್ಕೆ ಎಲ್ಲ ಸಹಕಾರ ನೀಡಲು ಪಕ್ಷ ಬದ್ಧವಾಗಿದೆ’ ಎಂದರು.

ADVERTISEMENT

‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ₹4.09 ಲಕ್ಷ ಕೋಟಿ ಗಾತ್ರದ ಬಜೆಟ್‌ನಲ್ಲಿ ₹1 ಲಕ್ಷ ಕೋಟಿಯನ್ನು ಗ್ಯಾರಂಟಿ, ಮಾಸಾಶನ, ರೈತರಿಗೆ ವಿದ್ಯುತ್ ರೂಪದಲ್ಲಿ ನೇರವಾಗಿ ಜನರಿಗೆ ನೀಡುತ್ತಿದೆ. ಆದರೂ ಈ ಕಲ್ಯಾಣ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಯೋಜನೆಗಳ ವಾಸ್ತವ ಲಾಭವನ್ನು ತೆರೆದಿಡಬೇಕು’ ಎಂದರು.

‘ದೇಶದಲ್ಲಿ 68 ಲಕ್ಷ ಮಕ್ಕಳು ಒಂದು ಹೊತ್ತಿನ ಊಟವಿಲ್ಲದೇ ಸಂಕಷ್ಟದಲ್ಲಿದ್ದು, ಪ್ರಪಂಚದಲ್ಲಿ ನಾವು 3ನೇ ಸ್ಥಾನದಲ್ಲಿದ್ದೇವೆ. ಇದನ್ನು ನಿವಾರಿಸಬೇಕಿದ್ದ ಕೇಂದ್ರ ಸರ್ಕಾರವು ಮನುಸೃತಿ ಆಧಾರದಲ್ಲಿ ಆಡಳಿತ ನಡೆಸುತ್ತಿದ್ದು, ಜಾತಿ, ಧರ್ಮದ ಹೆಸರಿನಲ್ಲಿ ಕಂದಕ ಸೃಷ್ಟಿಸುತ್ತಿದೆ. ಆದರೆ ಕಾಂಗ್ರೆಸ್ ಪಕ್ಷವು ಬಾಬಾ ಸಾಹೇಬರ ಸಂವಿಧಾನದ ಆಶಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮಸ್ಯೆ ನಿವಾರಣೆಗೆ ಶ್ರಮಿಸುತ್ತಿದೆ’ ಎಂದರು.

ಪ್ರಚಾರ ಸಮಿತಿ ಉಪಾಧ್ಯಕ್ಷ, ಮೈಸೂರು ಉಸ್ತುವಾರಿ ಕೋಟೆ ಎಂ.ಶಿವಣ್ಣ ಮಾತನಾಡಿ, ‘ರಾಜ್ಯದ ಯಾವುದೇ ಕ್ಷೇತ್ರದಲ್ಲೂ ಕಾಂಗ್ರೆಸ್ ಕಾರ್ಯಕರ್ತರು ನಿರ್ಣಾಯಕ ಶಕ್ತಿ ಹೊಂದಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯಲಿದ್ದು, ಎಲ್ಲರೂ ಉತ್ಸಾಹದಿಂದ ಕಾರ್ಯ ನಿರ್ವಹಿಸಬೇಕು’ ಎಂದರು.

ಜಿಲ್ಲಾ ಕಾಂಗ್ರೆಸ್‌ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ‘ಜ.7ರಂದು ಮುಖ್ಯಮಂತ್ರಿ ಹುದ್ದೆಯಲ್ಲಿ 7 ವರ್ಷ 240 ದಿನಗಳನ್ನು ಪೂರೈಸುವ ಸಿದ್ದರಾಮಯ್ಯ ಅವರು ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಹೆಗ್ಗಳಿಕೆಗೆ ಭಾಜನರಾಗಲಿದ್ದಾರೆ. ಅವರಿಗೆ ಕಾರ್ಯಕರ್ತರು ಇನ್ನಷ್ಟು ಶಕ್ತಿ ನೀಡಬೇಕು. ಈವರೆಗೆ 500 ಮಂದಿಗೆ ಬಾಂಡ್‌ ವಿತರಿಸಲಾಗಿದ್ದು, ಅಪಘಾತ, ಅನಾರೋಗ್ಯದಲ್ಲಿ ₹2 ಲಕ್ಷದವರೆಗೆ ವಿಮೆ ಸಹಕಾರ ದೊರೆಯಲಿದೆ’ ಎಂದರು.

200 ಮಂದಿಗೆ ಜೀವವಿಮೆ ಬಾಂಡ್‌ ವಿತರಿಸಲಾಯಿತು.

ಮೈಸೂರು–ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ದೊಡ್ಡಸ್ವಾಮೇಗೌಡ, ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಸಮಿತಿ ಉಪಾಧ್ಯಕ್ಷರಾದ ಎಡತಲೆ ಮಂಜುನಾಥ್, ನಾಗರಾಜು, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ನಗರ ಎಸ್‌ಸಿ ಘಟಕ ಅಧ್ಯಕ್ಷ ರಮೇಶ್, ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷೆ ಪ್ರಣತಿ ಪ್ರಕಾಶ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರವಿ, ಪ್ರಮುಖರಾದ ಮಹದೇವಸ್ವಾಮಿ, ಜವಾಹರ್ ಅಹ್ಮದ್, ನಾಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.