ADVERTISEMENT

ಬಿಎಸ್‌ವೈ ಕೆಳಗಿಳಿಸುವಲ್ಲಿ ಕಾಂಗ್ರೆಸ್‌ ಪಾತ್ರವಿಲ್ಲ: ಎಂ.ಲಕ್ಷ್ಮಣ್‌

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 9:48 IST
Last Updated 22 ಜುಲೈ 2021, 9:48 IST
ಎಂ.ಲಕ್ಷ್ಮಣ್‌
ಎಂ.ಲಕ್ಷ್ಮಣ್‌   

ಮೈಸೂರು: ‘ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಯಾವೊಂದು ಯತ್ನವನ್ನು ಕಾಂಗ್ರೆಸ್‌ ನಡೆಸುತ್ತಿಲ್ಲ. ಬಿಜೆಪಿಗರೇ ಈ ಕೆಲಸ ಮಾಡುತ್ತಿರೋದು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಗುರುವಾರ ಇಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮದ್ದು ಅರೆಯುವವರನ್ನು ಮನೆಯಲ್ಲೇ ಇಟ್ಟುಕೊಂಡು, ಕಾಂಗ್ರೆಸ್‌ ವಿರುದ್ಧ ಸುಳ್ಳು ಆರೋಪ ಹೊರಿಸಲಾಗುತ್ತಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿರುವ ಆಡಿಯೊ ಬಿಜೆಪಿಯೊಳಗಿನ ಬೆಳವಣಿಗೆಗೆ ಕನ್ನಡಿ ಹಿಡಿದಿದೆ’ ಎಂದು ಹೇಳಿದರು.

‘ಡಿ.ಕೆ.ಶಿವಕುಮಾರ್‌–ಸಿದ್ದರಾಮಯ್ಯ ನಡುವೆ ಬಿರುಕು ಮೂಡಿಸುವ ಯತ್ನವನ್ನು ಬಿಜೆಪಿಗರು ಮಾಡುತ್ತಿದ್ದಾರೆ’ ಎಂದು ಲಕ್ಷ್ಮಣ್ ಇದೇ ಸಂದರ್ಭ ದೂರಿದರು.

ADVERTISEMENT

ಬೆಂಬಲಿಸಿ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದನ್ನು ವೀರಶೈವ ಲಿಂಗಾಯತರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಹತ್ತಿದ ಏಣಿಯನ್ನೇ ಒದೆಯೋದು ಬಿಜೆಪಿಯ ಡಿಎನ್‌ಎ. ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡು ಬಿಸಾಕೋದು ಗುಜರಾತಿಗಳಾದ ನರೇಂದ್ರ ಮೋದಿ, ಅಮಿತ್‌ ಶಾ ಅವರಿಗೆ ಕರಗತವಾಗಿದೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕಾಂಗ್ರೆಸ್‌ ಬೆಂಬಲಿಸಿ’ ಎಂದು ಕೆಪಿಸಿಸಿ ವಕ್ತಾರರು ವೀರಶೈವ ಲಿಂಗಾಯತ ಸಮುದಾಯಕ್ಕೆ ಮನವಿ ಮಾಡಿದರು.

‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡ ಬಳಿಕ, ಈ ಹಿಂದಿನ ಸಮ್ಮಿಶ್ರ ಸರ್ಕಾರ ಪತನದ ರೂವಾರಿಗಳಾಗಿದ್ದ ಆಗಿನ 17 ಶಾಸಕರು ಅತಂತ್ರರಾಗಲಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಬೇತಾಳನಾಗಿ ಅಲೆದಾಡುತ್ತಿರುವಂತೆ ಇವರೂ ಅಲೆಯಲಿದ್ದಾರೆ’ ಎಂದು ಲಕ್ಷ್ಮಣ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.