ADVERTISEMENT

ಸಂವಿಧಾನದ ಆಶಯವೇ ಕಾಂಗ್ರೆಸ್‌ ಸಿದ್ಧಾಂತ: ಮುಖ್ಯಮಂತ್ರಿ‌ ಸಿದ್ದರಾಮಯ್ಯ

ಯುವ ಕಾಂಗ್ರೆಸ್‌ ಪದಾಧಿಕಾರಿಗಳ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 5:14 IST
Last Updated 19 ಜುಲೈ 2025, 5:14 IST
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ನಗರ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ನಗರ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ    

ಮೈಸೂರು: ‘ಜಾತ್ಯತೀತ, ಸಮಾಜವಾದ ಸೇರಿದಂತೆ ಸಂವಿಧಾನ ಆಶಯಗಳೇ ಕಾಂಗ್ರೆಸ್‌ ಪಕ್ಷದ ಸಿದ್ಧಾಂತವಾಗಿದ್ದು, ಯುವ ಕಾಂಗ್ರೆಸ್‌ನವರು ಸಿದ್ಧಾಂತದೊಂದಿಗೆ ರಾಜಿ ಆಗಬಾರದು’ ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಹೇಳಿದರು. 

ನಗರದ ಇಂದಿರಾಗಾಂಧಿ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮೈಸೂರು ನಗರ ಯುವ ಕಾಂಗ್ರೆಸ್‌ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ‌ ಮಾತನಾಡಿ, ‘ಪಕ್ಷದ ಸಿದ್ಧಾಂತ, ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು’ ಎಂದರು. 

‘ಸಂವಿಧಾನಾತ್ಮಕವಾಗಿ ನಡೆದುಕೊಳ್ಳುವ, ಸಾಮಾಜಿಕ ನ್ಯಾಯ, ಜಾತ್ಯತೀತತೆ ರಕ್ಷಿಸುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆ ಅವರು ಜಾತ್ಯತೀತತೆ ಹಾಗೂ ಸಮಾಜವಾದವನ್ನು ಸಂವಿಧಾನದಿಂದ ತೆಗೆಯಬೇಕು ಎಂದು ಹೇಳಿದ್ದಾರೆ. ಅವರಿಗೆ ಸಮಾಜವು ಅಸಮಾನತೆ, ಸಂಘರ್ಷ, ಜಾತೀಯತೆ, ಶೋಷಣೆಯಲ್ಲೇ ಇರಬೇಕು’ ಎಂದು ವಾಗ್ದಾಳಿ ನಡೆಸಿದರು. 

ADVERTISEMENT

‘ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದ ಬಿಜೆಪಿಯವರಿಗೆ ದೇಶಭಕ್ತಿ, ಅಭಿಮಾನದ ಬಗ್ಗೆ ಮಾತನಾಡಲು ಯಾವ ಹಕ್ಕಿದೆ. ಹಿಂದೂ‌ ಮಹಾಸಭಾ, ಆರ್‌ಎಸ್‌ಎಸ್ ಬಿಜೆಪಿ ಎಂದಿಗೂ‌ ಭಾರತೀಯ ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೂ ಸಬ್ ಕಾ ಸಾಥ್, ಸಬ್ ಕಾ‌ ವಿಕಾಸ್ ಎಂದು ಹೇಳುತ್ತಾರೆ. ಅವರಲ್ಲಿ ಒಬ್ಬರೇ ಒಬ್ಬ ಮುಸ್ಲಿಂ ಸಂಸದರಿಲ್ಲ. ಸಬ್ ಕಾ ಸಾಥ್ ಹೇಗಾಯಿತು' ಎಂದು ಪ್ರಶ್ನಿಸಿದರು. 

‘ನನ್ನನ್ನು ಸೋಲಿಸಿದವರು ಹಿಂದೂ ಮಹಾಸಭಾದ ವಿ‌.ಡಿ.ಸಾವರ್ಕರ್ ಹಾಗೂ ಸಿಪಿಐನ ರಂಗ ಎಂದೂ ಬಾಬಾ ಸಾಹೇಬರೇ ಹೇಳಿದ್ದಾರೆ. ಜನರಿಗೆ ಸತ್ಯ ತಲುಪಿಸುವ ಕೆಲಸ ಮಾಡಿ’ ಎಂದು ಸಲಹೆ ನೀಡಿದರು. 

‘ಬಿಜೆಪಿ, ಜೆಡಿಎಸ್‌ ಅವರಿಗೆ ಯಾವುದೇ ಸಿದ್ಧಾಂತವಿಲ್ಲ. ಸ್ವತಂತ್ರವಾಗಿ ಈ ಎರಡೂ ಪಕ್ಷಗಳು ಅಧಿಕಾರಕ್ಕೆ ಬಂದಿಲ್ಲ’ ಎಂದರು. 

‘ಗುಂಪುಗಾರಿಕೆ ಬೇಡ. ಒಬ್ಬ ನಾಯಕರ ಹಿಂದೆ ಹೋಗಬಾರದು. ಸಿದ್ಧಾಂತವೇ ನಾಯಕತ್ವ. ಸಿದ್ಧಾಂತದ ಜೊತೆಗೆ ನೀವೆಲ್ಲಾ ಇರಬೇಕು’ ಎಂದು ಸಲಹೆ ನೀಡಿದರು.

ನಗರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೈಯದ್ ಅಬ್ರಾರ್ ಹಾಗೂ ಪದಾಧಿಕಾರಿಗೆ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಮಂಜುನಾಥ್ ಗೌಡ ಪ್ರತಿಜ್ಞಾವಿಧಿ ಬೋಧಿಸಿದರು. 

ನಂತರ ಮಾತನಾಡಿದ ಮಂಜುನಾಥ್‌, ‘ನರೇಂದ್ರ ಮೋದಿ ವಿದೇಶಕ್ಕೆ ಹೋದಾಗೆಲ್ಲ ನೂರು ಮಂದಿ ಛಾಯಾಗ್ರಾಹಕರನ್ನು ಕರೆದೊಯ್ಯುತ್ತಾರೆ. ಅವರನ್ನು ಕಾಮಿಡಿ ಪ್ರಧಾನಿ ಎಂದು ಇತಿಹಾಸ ನೆನೆಪಿಸಿಕೊಳ್ಳುತ್ತದೆ’ ಎಂದು ವ್ಯಂಗ್ಯವಾಡಿದರು. 

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಕೆ.‌ಹರೀಶ್ ಗೌಡ, ಡಿ.ರವಿಶಂಕರ್, ಸೆಸ್ಕ್‌ ಅಧ್ಯಕ್ಷ ರಮೇಶ್‌ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಜ್ಯೋತಿಷ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ ಕುಮಾರ್, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್. ಮೂರ್ತಿ ಪಾಲ್ಗೊಂಡಿದ್ದರು‌. 

ಸತ್ಯ ತಲುಪಿಸಿ: ತನ್ವೀರ್‌ ಸೇಠ್‌

‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಜನರಲ್ಲಿ ಸುಳ್ಳು ಬಿತ್ತುತ್ತಿವೆ. ಸತ್ಯವನ್ನು ಯುವ ಕಾಂಗ್ರೆಸ್ಸಿಗರು ತಲುಪಿಸುವ ಕೆಲಸ ಮಾಡಬೇಕು' ಎಂದು ಶಾಸಕ ತನ್ವೀರ್ ಸೇಠ್‌ ಸಲಹೆ ನೀಡಿದರು.  ‘ಯುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸಂಘಟನೆ ಮಾಡಬೇಕು. ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ಪ್ರಭಾವಕ್ಕಿಂತಲೂ ಸಂಘಟನೆ ಶಿಸ್ತಿಗೆ ಪಕ್ಷದಲ್ಲಿ ಮನ್ನಣೆಯಿದೆ. ಚುನಾವಣಾ ನಂತರದಲ್ಲೂ ಪಕ್ಷ ಬಲಪಡಿಸಲು ಶ್ರಮಿಸಿ ರಾಜಕೀಯವಾಗಿ ಬೆಳೆಯಬೇಕು’ ಎಂದು ಸಲಹೆ ನೀಡಿದರು.  ‘ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುವುದಾಗಿ ಕೇಂದ್ರ ಸರ್ಕಾರ ನಿರುದ್ಯೋಗಿಗಳನ್ನು ಮಾಡಿದೆ. ಅಂಥ ಯುವ ಮನಸ್ಸುಗಳಿಗೆ ಕಾಂಗ್ರೆಸ್  ಚಿಂತನೆ ಹಾಗೂ ಸಾಧನೆಗಳನ್ನು ತಲುಪಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.