ADVERTISEMENT

ಕಾಂಗ್ರೆಸ್‌– ಜೆಡಿಎಸ್‌ ಎಕ್ಸ್‌ಪೈರಿ ಡೇಟ್‌ ಮುಗಿದಿದೆ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:18 IST
Last Updated 1 ಡಿಸೆಂಬರ್ 2019, 13:18 IST
ಶ್ರೀರಾಮುಲು
ಶ್ರೀರಾಮುಲು   

ಕೆ.ಆರ್‌.ಪೇಟೆ (ಮಂಡ್ಯ ಜಿಲ್ಲೆ): ‘ಕಾಂಗ್ರೆಸ್‌–ಜೆಡಿಎಸ್‌ ಪಕ್ಷಗಳ ಎಕ್ಸ್‌ಪೈರಿ ಡೇಟ್‌ ಮುಗಿದಿದ್ದು ಅವು ಮತ್ತೆಂದೂ ಅಧಿಕಾರಕ್ಕೆ ಬರಲಾರವು. ಮತ್ತೆ ಮೈತ್ರಿ ಸರ್ಕಾರ ಬರುತ್ತದೆ ಎಂಬುದು ತಿರುಕನ ಕನಸಾಗಿದೆ’ ಎಂದು ಆರೋಗ್ಯ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ಭಾನುವಾರ ನಡೆದ ವಾಲ್ಮೀಕಿ ನಾಯಕ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಅವರು ‘ಮಾಜಿ ಪ್ರಧಾನಿಯ ಮಕ್ಕಳಾದ ಮಾತ್ರಕ್ಕೆ ನೀವು ಹೇಳಿದ್ದೆಲ್ಲವನ್ನೂ ನಾವು ಕೇಳಬೇಕಾಗಿಲ್ಲ. ಹೆಣ್ಣುಮಕ್ಕಳ ಬಗ್ಗೆ ಬಹಳ ಕಟ್ಟದಾಗಿ ಮಾತನಾಡುತ್ತೀರಿ. ಮಹಿಳೆಗೆ ಅವಮಾನ ಮಾಡಿ ಈಗಾಗಲೇ ಒಂದು ಅದರ ಬಾರಿ ಫಲ ಉಂಡಿದ್ದೀರಿ. ಸುಮಲತಾ ಅವರ ವಿರುದ್ಧ ಸೋಲು ಕಾಣಲು ಮಹಿಳೆಯರ ಶಾಪವೇ ಕಾರಣ. ಕಾಮಾಟಿಪುರ ಮಾಡುವುದಾಗಿ ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಚ್‌ಡಿಕೆ ಹೊಗಳಿದ ನಾರಾಯಣಗೌಡ: ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಹೊಗಳಿದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ‘ಕಳೆದ ಚುನಾವಣೆಯಲ್ಲಿ ಕುಮಾರಣ್ಣ ಒಬ್ಬರನ್ನು ಬಿಟ್ಟರೆ ಅವರ ಕುಟುಂಬದ ಎಲ್ಲರೂ ನನ್ನನ್ನು ಸೋಲಿಸಲು ಪಣ ತೊಟ್ಟಿದ್ದರು. ಕೆರೆ–ಕಟ್ಟೆ ತುಂಬಿಸಬೇಕು ಎಂದಾಗ ಕುಮಾರಣ್ಣ ತಕ್ಷಣ ಕಡತಕ್ಕೆ ಸಹಿ ಹಾಕಿ ಕೊಟ್ಟರು. ಆದರೆ ಮರುದಿನ ಆ ಕಡತವೇ ಕಣ್ಣಿಗೆ ಕಾಣಲಿಲ್ಲ. ಒಬ್ಬ ಅಧಿಕಾರಿಯ ವರ್ಗಾವಣೆಯೂ ನನಗೆ ಗೊತ್ತಾಗುತ್ತಿರಲಿಲ್ಲ. ಆ ಕುಟುಂಬದ ಹಿಂಸೆಯಿಂದ ಕಣ್ಣೀರಲ್ಲಿ ಕೈತೊಳೆದಿದ್ದೇನೆ’ ಎಂದರು.

ADVERTISEMENT

ಸೀರೆ ಧರಿಸಿ ಬರಲಾ ಎಂದಿದ್ದೆ: ‘ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಕ್ಷೇತ್ರಕ್ಕೆ ₹ 1,200 ಕೋಟಿ ಅನುದಾನ ಕೊಟ್ಟಿದ್ದರು. ಆದರೆ ನನ್ನ ಕ್ಷೇತ್ರಕ್ಕೆ ಕೇವಲ ₹ 2 ಕೋಟಿ ಕೊಟ್ಟರು. ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಎಸ್‌.ಪುಟ್ಟರಾಜು ಅವರ ಬಳಿ, ಸೀರೆ ಧರಿಸಿ ಬರಲಾ ಎಂದು ಕೇಳಿದ್ದೆ’ ಎಂದರು.

ಶ್ರೀರಾಮುಲು ಕಾಲಿಗೆ ನಮಸ್ಕರಿಸಿದ ನಾರಾಯಣಗೌಡ ‘ಶ್ರೀರಾಮುಲು ನನ್ನ ಅಣ್ಣ ಇದ್ದಂತೆ’ ಎಂದರು. ನಟ–ನಟಿಯರು ಬಿಜೆಪಿ ಪರ ಪ್ರಚಾರ ಮುಂದುವರಿಸಿದ್ದಾರೆ. ಮುಂಬೈ ಕನ್ನಡಿಗರ ಸಂಘದ ಪದಾಧಿಕಾರಿಗಳೂ ನಾರಾಯಣಗೌಡ ಪರ ಪ್ರಚಾರಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.