ADVERTISEMENT

ರಾಜೀನಾಮೆ ನೀಡದಿದ್ದರೆ ಸಾಕ್ಷಿ ನಾಶದ ಸಂಭವ: ಆರ್. ಧ್ರುವನಾರಾಯಣ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 6:15 IST
Last Updated 13 ಏಪ್ರಿಲ್ 2022, 6:15 IST
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ   

ಮೈಸೂರು: ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಒಂದು ವೇಳೆ ಈಗ ರಾಜೀನಾಮೆ ನೀಡದೇ ಅಧಿಕಾರದಲ್ಲಿ ಮುಂದುವರಿದರೆ ಸಾಕ್ಷಿ ನಾಶದ ಸಂಭವ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ತಿಳಿಸಿದರು.

ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ನಂತರ ಅಧಿಕಾರದಲ್ಲಿ ಮುಂದುವರೆದ ಉದಾಹರಣೆಗಳು ಇಲ್ಲ. ನ್ಯಾಯಯುತವಾದ ಹಾಗೂ ನಿಷ್ಪಕ್ಷಪಾತವಾದ ತನಿಖೆಗೆ ಸರ್ಕಾರ ಈ ಕೂಡಲೇ ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಇಲ್ಲಿ ಸುದ್ದಿಗಾರರಿಗೆ ಹೇಳಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷರು ಈ ಹಿಂದೆ ಶೇ 40 ರಷ್ಟು ಕಮಿಷನ್ ಎಂದು ಆರೋಪಿಸಿದ್ದರು‌. ಈಗ ಈ ಆತ್ಮಹತ್ಯೆ ಪ್ರಕರಣ ಅವರ ಆರೋಪಕ್ಕೆ ಪುಷ್ಟಿ ನೀಡಿದೆ. ಇದೊಂದು ಭ್ರಷ್ಟ ಸರ್ಕಾರ ಎನ್ನುವುದನ್ನು ಸಾಬೀತು ಮಾಡಿದೆ ಎಂದರು.

ADVERTISEMENT

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾನು ತಿನ್ನುವುದಿಲ್ಲ, ತಿನ್ನುವವರಿಗೂ ಬಿಡುವುದಿಲ್ಲ ಎಂದಿದ್ದರು.

ಆದರೆ ಈಗ ನರೇಂದ್ರ ಮೋದಿ ಅವರು ಮೌನಕ್ಕೆ ಶರಣಾಗಿದ್ದಾರೆ. ಇದರ ಅರ್ಥ ಏನು? ಎಂದೂ ಅವರು ಪ್ರಶ್ನಿಸಿದರು.

ಕೂಡಲೇ ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ನಿಷ್ಪಕ್ಷಪಾತವಾದ ತನಿಖೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.