
ಮೈಸೂರು: ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಅಡ್ಡಗಟ್ಟಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಮೈಸೂರು ನಗರ ಮತ್ತು ಗ್ರಾಮಾಂತರ ಯುವ ಮೋರ್ಚಾ ಮುಖಂಡರು ರಾಮಸ್ವಾಮಿ ವೃತ್ತದಲ್ಲಿ ಶನಿವಾರ ಪ್ರತಿಭಟಿಸಿದರು.
‘ದಲಿತ ರಾಜ್ಯಪಾಲರನ್ನು ಅವಮಾನಿಸಿದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ’, ‘ದಲಿತ ವಿರೋಧಿ ಕಾಂಗ್ರೆಸ್‌ಗೆ ಧಿಕ್ಕಾರ’, ‘ರೌಡಿ ಕೊತ್ವಾಲ್ ಶಿಷ್ಯ ಹರಿಪ್ರಸಾದ್‌ಗೆ ಧಿಕ್ಕಾರ’, ‘ಕಾಂಗ್ರೆಸ್ ಗೂಂಡಾಗಳಿಗೆ ಧಿಕ್ಕಾರ’, ‘ಹರಿಪ್ರಸಾದ್ ಹಠಾವೋ ಕರ್ನಾಟಕ ಬಚಾವೋ’ ಮುಂತಾದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ‘ರಾಜ್ಯಪಾಲರು ಜಂಟಿ ಅಧಿವೇಶನದ ಭಾಷಣ ಮುಗಿಸಿಕೊಂಡು ತೆರಳುವಾಗ ಕಾಂಗ್ರೆಸ್ ಶಾಸಕರು ಅವರನ್ನು ತಡೆದು ಗೂಂಡಾಗಳಂತೆ ವರ್ತಿಸಿದ್ದಾರೆ. ಬಿ.ಕೆ.ಹರಿಪ್ರಸಾದ್, ಬಾಲಕೃಷ್ಣ ಸೇರಿದಂತೆ ಹಲವು ಶಾಸಕರು ರಾಜ್ಯಪಾಲರ ಸ್ಥಾನಕ್ಕೆ ಅಗೌರವ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೆ. ಹೀಗಾಗಿ ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಗೂಂಡಾ ಶಾಸಕರನ್ನು ವಜಾಗೊಳಿಸಬೇಕು. ಸಂವಿಧಾನಕ್ಕೆ ಅಪಮಾನ ಮಾಡಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ಆಗ್ರಹಿಸಿದರು.
ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ ಮಾತನಾಡಿ, ‘ಕಾಂಗ್ರೆಸ್ ಶಾಸಕರು ರಾಜ್ಯಪಾಲರ ಸಾಂವಿಧಾನಿಕ ಹುದ್ದೆಗೆ ಅಗೌರವ ತೋರಿದ್ದಾರೆ. ಅವರಿಗೆ ಅದು ಸಾಂವಿಧಾನಿಕ ಹುದ್ದೆ ಎಂಬುದೇ ಗೊತ್ತಿಲ್ಲ. ಬಿ.ಕೆ.ಹರಿಪ್ರಸಾದ್, ಬಾಲಕೃಷ್ಣ ಅವರು ಮಾರ್ಷಲ್‌ಗಳು ಇಲ್ಲದಿದ್ದರೆ ರಾಜ್ಯಪಾಲರ ಮೇಲೆ ಹಲ್ಲೆಯನ್ನೇ ಮಾಡುತ್ತಿದ್ದರು. ಕಾಂಗ್ರೆಸ್‌ನವರು ಕರ್ನಾಟಕವನ್ನು ಗೂಂಡಾರಾಜ್ಯ ಮಾಡಲು ಹೊರಟಿದ್ದಾರೆ. ಆದರೆ, ಇದು 1980ರ ದಶಕ ಅಲ್ಲ. ಇದು ವಿಕಸಿತ ಭಾರತ’ ಎಂದರು.
‘ಪಕ್ಷಾಂತರ ಮಾಡಿದ್ದಕ್ಕೆ 18 ಶಾಸಕರನ್ನು ಅಮಾನತು ಮಾಡಿದ್ದರು. ಆದರೀಗ ರಾಜ್ಯಪಾಲರಿಗೆ ಅಪಮಾನ ಮಾಡಿದ್ದರೂ ಸುಮ್ಮನಿರುವುದೇಕೆ? ಕೂಡಲೇ ದುರ್ವತನೆ ತೋರಿದ ಶಾಸಕರು ರಾಜ್ಯಪಾಲರ ಕ್ಷಮೆ ಕೋರಬೇಕು. ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಸುಬ್ಬಣ್ಣ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಮಿರ್ಲೆ ಶ್ರೀನಿವಾಸ್ ಗೌಡ, ಸೋಮಶೇಖರ್, ಚಂದ್ರಶೇಖರ ದಾರೀಪುರ, ಕಾರ್ತಿಕ್ ಮರಿಯಪ್ಪ, ಗೋಕುಲ್ ಗೋವರ್ಧನ್, ರುದ್ರಸ್ವಾಮಿ, ಜೋಗಿ ಮಂಜು, ರಾಕೇಶ್ ಭಟ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.