ಮೈಸೂರು: ‘ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಮಹಿಳಾ ಘಟಕ ಪ್ರತಿಭಟನೆ ನಡೆಸಿರುವುದು ಖಂಡನೀಯ’ ಎಂದು ಜೆಡಿಎಸ್ ನಗರ ಘಟಕ ಅಧ್ಯಕ್ಷೆ ಎಸ್.ಪ್ರೇಮಾ ಶಂಕರೇಗೌಡ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರತಿಭಟನೆ ವೇಳೆ ಖಾಲಿ ಚೊಂಬು ಪ್ರದರ್ಶಿಸಲಾಗಿದೆ. ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ನಾಲಿಗೆ ಹರಿಬಿಟ್ಟು ಮಾತನಾಡಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.
‘ಕೇಂದ್ರ ಸಕಾರ ರಾಜ್ಯದ ರೈಲ್ವೆ ವಲಯಕ್ಕೆ ₹7,500 ಕೋಟಿ ನೀಡಿದೆ. ಬೆಂಗಳೂರು- ಹೈದರಾಬಾದ್ 12 ಪಥದ ರಸ್ತೆ ನಿರ್ಮಾಣ ಅಂತಿಮ ಹಂತಕ್ಕೆ ಬಂದಿದೆ. ಹೀಗೆ ಅನೇಕ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಆದರೆ ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆಯ ಹಣ ನೀಡಲಾಗದೇ ದಿವಾಳಿಯಾಗಿದೆ’ ಎಂದು ಲೇವಡಿ ಮಾಡಿದರು.
‘ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದೇ ಹತಾಶರಾಗಿರುವ ಪುಷ್ಪಾ ಅಮರನಾಥ್, ಕೇಂದ್ರದ ವಿರುದ್ಧ ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
ಎಂ.ಡಿ. ದಾಕ್ಷಾಯಿಣಿ, ಭಾಗ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.