ADVERTISEMENT

ಕುಕ್ಕರ್ ಬಾಂಬ್ ಪ್ರಕರಣ: ನಕಲಿ ಆಧಾರ್ ವಿಳಾಸ ನೀಡಿ ತರಬೇತಿಗೆ ಸೇರಿದ್ದ ಶಾರೀಕ್

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 10:23 IST
Last Updated 22 ನವೆಂಬರ್ 2022, 10:23 IST
   

ಮೈಸೂರು: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಆರೋಪದಲ್ಲಿ ಬಂಧಿತನಾಗಿರುವ ಶಾರೀಕ್‌
ಬಾಡಿಗೆ ಮನೆ ಪಡೆಯಲು ನೀಡಿದ್ದ ನಕಲಿ ಆಧಾರ್‌ ಕಾರ್ಡ್‌ನ ವಿಳಾಸವನ್ನೇ ನೀಡಿ ಮೊಬೈಲ್‌ ತರಬೇತಿ ಪ‍ಡೆಯಲು ಸೇರಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ.

‘ಇಲ್ಲಿನ ಅಗ್ರಹಾರದಲ್ಲಿರುವ ಡಿ. ಬನಮಯ್ಯ ರಸ್ತೆಯಲ್ಲಿರುವ ಎಸ್‌ಎಂಎಂ ಮೊಬೈಲ್‌ ಫೋನ್ ತರಬೇತಿ ಕೇಂದ್ರಕ್ಕೆ ಸೇರುವ ಮುನ್ನ ಧಾರವಾಡ ಮೂಲದ ಪ್ರೇಮರಾಜ್‌ ಅವರ ನಕಲಿ ಆಧಾರ್‌ ಕಾರ್ಡ್‌ ನೀಡಿ ಸೇರಿದ್ದ’ ಎಂದು ಸಂಸ್ಥೆಯ ಮುಖ್ಯಸ್ಥ ಪ್ರಸಾದ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ಆಧಾರ್‌ ಕಾರ್ಡ್‌ನಲ್ಲಿ ಪ್ರೇಮರಾಜ್‌ ಚಿತ್ರಕ್ಕೆ ಶಾಕೀರ್‌ ತನ್ನ ಚಿತ್ರ ಬದಲಾಯಿಸಿ ಸಂಸ್ಥೆಗೆ ದಾಖಲೆಗಳನ್ನು ನೀಡಿದ್ದ. ಹೀಗಾಗಿ, ದಾಖಲೆ ಪರಿಶೀಲನೆ ವೇಳೆ ಯಾವುದೇ ಅನುಮಾನಗಳು ಬಂದಿರಲಿಲ್ಲ. ಆನ್‌ಲೈನ್‌ ಮೂಲಕ ಜಾಹೀರಾತು ಗಮನಿಸಿ, ಸಂಸ್ಥೆಗೆ ಸೇರಲು ಬಯಸಿದ್ದ. ನನಗೆ ಕಾಲ್‌ಸೆಂಟರ್‌ನಲ್ಲಿ ಕೆಲಸ ಸಿಕ್ಕಿದ್ದು, 15 ದಿನಗಳ ನಂತರ ಕೆಲಸಕ್ಕೆ ಸೇರಲಿದ್ದೇನೆ. ಮನೆಗೆ ಕೂರಲು ಬೇಸರವಾಗಿ ಈ ಕೋರ್ಸ್‌ ಸೇರಲು ಇಚ್ಚಿಸಿದ್ದೇನೆ’ ಎಂದು ಆತ ತಿಳಿಸಿದ್ದ ಎಂದರು.

ADVERTISEMENT

10 ಮೊಬೈಲ್‌ ಫೋನ್ ಖರೀದಿ: 'ಮೊಬೈಲ್‌ ತರಬೇತಿಗಾಗಿಯೇ 10 ಮೊಬೈಲ್‌ಗಳನ್ನು ಖರೀದಿಸಿದ್ದ ಈತ, ತರಗತಿಗೆ ಆಗಾಗ ಗೈರಾಗುತ್ತಿದ್ದ. ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದ ಕಾರಣದಿಂದ ಮಾತಿನ ಶೈಲಿಯಲ್ಲಿ ಯಾವುದೇ ಅನುಮಾನ ಬಂದಿರಲಿಲ್ಲ. ಹಾವಭಾವಗಳಲ್ಲಿ ವ್ಯತ್ಯಾಸವಿರಲಿಲ್ಲ. ಮೊಬೈಲ್‌ ಡಿ.ಪಿಯಲ್ಲೂ ಶಿವನ ಚಿತ್ರ ಹಾಕಿಕೊಂಡಿದ್ದರಿಂದ ಮುಸ್ಲಿಂ ಎಂಬ ಅನುಮಾನವೂ ಬಂದಿರಲಿಲ್ಲ’ ಎಂದರು.

ಮನೆ ಖಾಲಿ ಖಾಲಿ: ಶಾರೀಕ್‌ ವಾಸ್ತವ್ಯ ಹೊಂದಿದ್ದ ಮೇಟಗಳ್ಳಿಯ ಲೋಕನಾಯಕದ 10 ಅಡ್ಡರಸ್ತೆಯ ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು ಪೊಲೀಸರು ಕೊಂಡೊಯ್ದಿದ್ದು, ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸುತ್ತಲಿನ ನಿವಾಸಿಗಳಲ್ಲಿ ಕೂಡ ಭಯದಲ್ಲಿರುವುದು ಕಂಡುಬಂತು.
ಮನೆಯ ಸಣ್ಣದಾದ ಕೊಠಡಿಯಲ್ಲಿಯೇ ಶಾರೀಕ್‌ ಬಾಂಬ್‌ ತಯಾರಿಕೆಯ ವಸ್ತುಗಳನ್ನು ಶೇಖರಿಸಿಟ್ಟುಕೊಂಡಿದ್ದ ಎಂಬ ಅಂಶ ಸುತ್ತಲಿನ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಸದ್ಯ ಮನೆಗೆ ಪ್ರವೇಶಿಸುವ ರಸ್ತೆಗೆ ಬ್ಯಾರಿಕೇಡ್‌ ಹಾಕಲಾಗಿದ್ದು, ಪೊಲೀಸ್‌ ಕಾನ್‌ಸ್ಟೆಬಲ್‌ಗಳಲ್ಲಿ ಕಾವಲು ಕಾಯುತ್ತಿದ್ದರು.

ಹೆಚ್ಚಿನ ಪರಿಶೀಲನೆ: ಶಂಕಿತ ಆರೋಪಿ ಮೈಸೂರಿನಲ್ಲಿಯೇ ಬಾಂಬ್‌ ತಯಾರಿಸುತ್ತಿದ್ದ ಅಂಶ ಖಚಿತಪಡುತ್ತಿದ್ದಂತೆಯೇ, ಪೊಲೀಸರು ನಗರದಲ್ಲಿ ನಾಕಾಬಂಧಿ ಹೆಚ್ಚಿಸಿದ್ದಾರೆ.

ಭಾನುವಾರ ರಾತ್ರಿಯಿಂದಲೇ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆಯೂ ವಾಹನ, ದಾಖಲೆಗಳ ಪರಿಶೀಲನೆಯಲ್ಲಿ ಪೊಲೀಸರು ತೊಡಗಿದ್ದಾರೆ.

ಹೊರಜಿಲ್ಲೆ, ಹೊರರಾಜ್ಯ ವಾಹನಗಳ ಮೇಲೆ ಹೆಚ್ಚಿನ ನಿಗಾವಹಿಸಿದ್ದು, ದೋಷಪೂರಿತ ನೋಂದಣಿ‌ ಸಂಖ್ಯೆ, ಅನುಮಾನಸ್ಪದ ವ್ಯಕ್ತಿಗಳ ಮೇಲೂ ಹೆಚ್ಚಿನ ಕಣ್ಗಾವಲಿಟ್ಟಿದ್ದಾರೆ.

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.