ADVERTISEMENT

ಸಹಕಾರ ಎಲ್ಲ ರಂಗದಲ್ಲೂ ಮುಖ್ಯ: ಸ್ವಾಮಿ ಮುಕ್ತಿದಾನಂದ

​ಪ್ರಜಾವಾಣಿ ವಾರ್ತೆ
Published 9 ಮೇ 2025, 14:12 IST
Last Updated 9 ಮೇ 2025, 14:12 IST
ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಸಂಯುಕ್ತ ಸಹಕಾರಿ ಸಿಬ್ಬಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಸಂಯುಕ್ತ ಸಹಕಾರಿ ಸಿಬ್ಬಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಪರಸ್ಪರ ಸಹಕಾರ ಎಂಬುದು ಕುಟುಂಬ, ವೃತ್ತಿಪರ ಜೀವನ ಸೇರಿದಂತೆ ಎಲ್ಲ ಕಡೆಯೂ ಅತ್ಯಂತ ಮುಖ್ಯವಾಗುತ್ತದೆ’ ಎಂದು ಇಲ್ಲಿನ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಹೇಳಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ನಗರದ ಯಾದವಗಿರಿಯ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ಸೌಹಾರ್ದ ಸಂಯುಕ್ತ ಸಹಕಾರಿಯ ಸಿಬ್ಬಂದಿಗೆಂದು ಶುಕ್ರವಾರ ಆಯೋಜಿಸಿದ್ದ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮನುಷ್ಯರಾದ ನಾವೆಲ್ಲರೂ ಪರಸ್ಪರ ಸಹಕಾರ–ಸೌಹಾರ್ದದಿಂದ ಸಮಾಜ ಬೆಳೆಸಬೇಕು’ ಎಂದರು.

ADVERTISEMENT

‘ಸಹಕಾರಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರಚಿಸಲಾಗಿದ್ದು, ಅದರಂತೆ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷದ ವಿಷಯ. ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ, ಎಲ್ಲ ಸಂಸ್ಥೆಗಳೂ ಬೆಳವಣಿಗೆ ಹೊಂದುತ್ತವೆ’ ಎಂದು ತಿಳಿಸಿದರು.

ಸಹಕಾರಿಯ ಶಿಕ್ಷಣ ನಿಧಿ ಸಲಹಾ ಸಮಿತಿ ಸದಸ್ಯ ಎಚ್.ವಿ.ರಾಜೀವ್, ‘ಸಹಕಾರ ಸಂಘದ ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ನಡುವೆ ಉತ್ತಮ ಬಾಂಧವ್ಯ ಇರಬೇಕು. ಸಹಕಾರ ಕಾಯ್ದೆ– ಕಾನೂನು ಅರಿತುಕೊಳ್ಳಬೇಕು. ಬದಲಾವಣೆಗಳನ್ನು ತಿಳಿದುಕೊಳ್ಳಬೇಕು. ಯಾವುದೇ ಸಮಸ್ಯೆ ಎದುರಾದಾಗ ಸಹಕಾರ ಇಲಾಖೆಯ ಗಮನಕ್ಕೆ ತಂದು ಪರಿಹರಿಸಿಕೊಂಡು ಸಂಘವನ್ನು ಸುಗಮವಾಗಿ ಮುನ್ನಡೆಸುವ ಕಡೆಗೆ ಪ್ರಥಮ ಆದ್ಯತೆ ನೀಡಬೇಕು’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜನಗೌಡ ಅಧ್ಯಕ್ಷತೆ ವಹಿಸಿದ್ದರು. ಶ್ರೀರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಸಂಚಾಲಕ ಸ್ವಾಮಿ ಮಹಾಮೇದಾನಂದ, ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ಸಿ.ಎನ್.ಪರಶಿವಮೂರ್ತಿ, ನಿರ್ದೇಶಕ ಎಸ್.ಕೆ.ಮಂಜುನಾಥ್, ಸೌಹಾರ್ದ ಸಹಕಾರಿ ದಾವಾ ಪಂಚಾಯಿತಿ ನ್ಯಾಯಾಲಯದ ಪೀಠಾಧಿಕಾರಿ ಕೆ.ಗಗನಾ, ಸಹಕಾರ ಸಂಘಗಳ ಜಂಟಿ ನಿಬಂಧಕ ಸಿ.ಪ್ರಸಾದ ರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ.ಪಾಟೀಲ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.