ADVERTISEMENT

ಮಹಾರಾಷ್ಟ್ರದಿಂದ ಬಂದ ಗರ್ಭಿಣಿಗೆ ಸೋಂಕು

ರಾಮಕೃಷ್ಣನಗರದ 'ಜಿ' ಬ್ಲಾಕ್‌ನ ಕೆಲ ರಸ್ತೆಗಳಲ್ಲಿ ಸೀಲ್‌ಡೌನ್‌

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 14:25 IST
Last Updated 3 ಜೂನ್ 2020, 14:25 IST
ಮೈಸೂರಿನ ರಾಮಕೃಷ್ಣನಗರದ ‘ಜಿ’ ಬ್ಲಾಕ್‌ನ ಕೆಲ ರಸ್ತೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ಸೀಲ್‌ಡೌನ್‌ ಮಾಡಲಾಗಿದೆ
ಮೈಸೂರಿನ ರಾಮಕೃಷ್ಣನಗರದ ‘ಜಿ’ ಬ್ಲಾಕ್‌ನ ಕೆಲ ರಸ್ತೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ಸೀಲ್‌ಡೌನ್‌ ಮಾಡಲಾಗಿದೆ   

ಮೈಸೂರು: ಮಹಾರಾಷ್ಟ್ರದಿಂದ ಬಂದಿದ್ದ ಗರ್ಭಿಣಿ ಸೇರಿದಂತೆ ಇಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿರುವುದರಿಂದ, ಮೈಸೂರಿನ ರಾಮಕೃಷ್ಣನಗರದ ‘ಜಿ’ ಬ್ಲಾಕ್‌ನ ಕೆಲ ರಸ್ತೆಗಳಲ್ಲಿ ಸೀಲ್‌ಡೌನ್‌ ಮಾಡಲಾಗಿದೆ.

ಮಹಿಳೆ ಹಾಗೂ ಅವರ ತಾಯಿಯನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿದ್ದ ಮನೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದೆ.

28 ದಿನ ಸೀಲ್‌ಡೌನ್‌ ಮಾಡಲು ಪಾಲಿಕೆ ನಿರ್ಧರಿಸಿದೆ. ಅಂಗಡಿ ಮಳಿಗೆಗಳನ್ನು ಮುಚ್ಚಿಸಲಾಗಿದೆ. ಕಂಟೇನ್‌ಮೆಂಟ್‌ ವಲಯ ಎಂದು ಘೋಷಿಸಿರುವ ಕಾರಣ ಇಲ್ಲಿನ ನಿವಾಸಿಗಳಿಗೆ ಮನೆ ಬಾಗಿಲಿಗೆ ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಬ್ಯಾರಿಕೇಡ್‌ ಅಳವಡಿಸಲಾಗಿದೆ.

ADVERTISEMENT

‘ಮಹಾರಾಷ್ಟ್ರದ ಥಾಣೆ ಜಿಲ್ಲೆಯಿಂದ ಭಾನುವಾರ ಗರ್ಭಿಣಿ, ಆಕೆ ತಾಯಿ ಹಾಗೂ ಪತಿ ಬಂದಿದ್ದರು. ಬೆಂಗಳೂರಿನಲ್ಲೇ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪ‍ತಿಯನ್ನು ಬೆಂಗಳೂರಿನಲ್ಲೇ ಫೆಸಿಲಿಟಿ ಕ್ವಾರಂಟೈನ್‌ ಮಾಡಲಾಗಿದೆ. ಗರ್ಭಿಣಿಯನ್ನು ತಾಯಿ ಜೊತೆ ಮೈಸೂರಿಗೆ ಕಳಿಸಿಕೊಟ್ಟಿದ್ದರು. ಬುಧವಾರ ವರದಿ ಬಂದಿದ್ದು, ಇಬ್ಬರಲ್ಲೂ ಪಾಸಿಟಿವ್‌ ಇರುವುದು ಗೊತ್ತಾಯಿತು’ ಎಂದು ಪಾಲಿಕೆ ಆರೋಗ್ಯಾಧಿಕಾರಿ ನಾಗರಾಜ್‌ ತಿಳಿಸಿದರು.

‘ಗರ್ಭಿಣಿ ಹಾಗೂ ಅವರ ತಾಯಿಯನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಮನೆಯಲ್ಲಿದ್ದ ತಂದೆಯನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದರು.

ಆತಂಕ ಬೇಡ: ‘ಜನರು ಆತಂಕಪಡುವ ಅಗತ್ಯವಿಲ್ಲ. 28 ದಿನಗಳ ಸೀಲ್‌ಡೌನ್‌ ಪಾಲನೆ ಮಾಡಬೇಕು. ಈ ರಸ್ತೆಗಳಲ್ಲಿ ವಾಸವಿರುವ ನೌಕರರು ಬೇರೆ ಕಡೆ ಉಳಿದುಕೊಂಡು ಕೆಲಸಕ್ಕೆ ಹೋಗಲು ಅನುವು ಮಾಡಿಕೊಡಲಾಗಿದೆ’ ಎಂದು ಪಾಲಿಕೆ ಸದಸ್ಯ ಶರತ್‌ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.