ADVERTISEMENT

ಹಾಸಿಗೆ, ದಿಂಬು ಖರೀದಿಸಿಲ್ಲ; ಬಾಡಿಗೆಯನ್ನೂ ನೀಡಿಲ್ಲ: ಸಚಿವ ಅಶೋಕ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 17:22 IST
Last Updated 15 ಜುಲೈ 2020, 17:22 IST
ಆರ್‌.ಅಶೋಕ
ಆರ್‌.ಅಶೋಕ   

ಮೈಸೂರು: ‘ಹಾಸಿಗೆ, ದಿಂಬನ್ನು ನಾವು ಇನ್ನೂ ಖರೀದಿಯೇ ಮಾಡಿಲ್ಲ. ನಯಾ ಪೈಸೆ ದುಡ್ಡು ಕೊಟ್ಟಿಲ್ಲ, ಬಾಡಿಗೆಯನ್ನೂ ನೀಡಿಲ್ಲ’ ಎಂದು ಕಂದಾಯ ಸಚಿವ ಆರ್‌.ಅಶೋಕ ಬುಧವಾರ ಇಲ್ಲಿ ತಿಳಿಸಿದರು.

‘ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಹಾಸಿಗೆ, ದಿಂಬು ಖರೀದಿಯಲ್ಲೂ ಅವ್ಯವಹಾರ ನಡೆದಿದೆ ಎಂದು ಡಿ.ಕೆ.ಶಿವಕುಮಾರ್‌ ಆರೋಪಿಸುತ್ತಿದ್ದಾರೆ. ₹ 200 ಕೋಟಿ ವ್ಯಯಿಸಲಾಗಿದೆ ಎಂದು ಕಾಂಗ್ರೆಸ್‌ನ ಇನ್ನಿತರ ಮುಖಂಡರು ದೂರುತ್ತಿದ್ದಾರೆ. ಆದರೆ, ಮೂರು ತಿಂಗಳು ಬಾಡಿಗೆಗೆ ಇಟ್ಟುಕೊಂಡರೂ ₹ 25 ಕೋಟಿ ಖರ್ಚಾಗಲ್ಲ. ಖರೀದಿಸಿದರೆ ₹ 7 ಕೋಟಿ ಕೂಡ ಆಗಲ್ಲ’ ಎಂದರು.

ಮರುಬಳಕೆ ಮಾಡುವಂಥ ಮಂಚ, ಹಾಸಿಗೆ, ದಿಂಬು, ಫ್ಯಾನ್‌, ಮಗ್‌, ಬಕೆಟ್‌ ಅನ್ನು ಖರೀದಿಸುತ್ತೇವೆ. ಕೊರೊನಾ ಸಮಸ್ಯೆ ಮುಗಿದ ಮೇಲೆ ಅವುಗಳನ್ನು ಸ್ಯಾನಿಟೈಸ್‌ ಮಾಡಿ ಹಾಸ್ಟೆಲ್‌, ಶಾಲೆಗಳಿಗೆ ಕೊಡಬಹುದು. ಪುನರ್‌ ಬಳಕೆ ಮಾಡಲಾಗದ ಪರಿಕರಗಳನ್ನು ಬಾಡಿಗೆಗೆ ಪಡೆಯುವುದಾಗಿ ಹೇಳಿದರು.

ADVERTISEMENT

‘ಕೋವಿಡ್‌ ನಿರ್ವಹಣೆ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಅವರ ಮನೆ ಬಾಗಿಲಿಗೇ ತಲುಪಿಸಲಾಗುವುದು. ಲೆಕ್ಕ ಕೇಳಲು ಅವರು ವಿಧಾನಸೌಧಕ್ಕೆ ಬರುವ ಅಗತ್ಯವೇ ಇಲ್ಲ. ಭ್ರಷ್ಟಾಚಾರ ನಡೆಯಲು ಇದು ಕಾಂಗ್ರೆಸ್‌ ಸರ್ಕಾರ ಅಲ್ಲ. ಕೋವಿಡ್‌ ನಿರ್ವಹಣೆಗಾಗಿ ನಾವು ಇನ್ನೂ ₹ 400 ಕೋಟಿ ಖರ್ಚು ಮಾಡಿಲ್ಲ. ₹ 2 ಸಾವಿರ ಕೋಟಿ ಭ್ರಷ್ಟಾಚಾರ ನಡೆಯಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಕೋವಿಡ್‌ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಯಾವುದೇ ಸಹಕಾರ ಸಿಗುತ್ತಿಲ್ಲ ಎಂಬುದನ್ನು ನೋವಿನಿಂದ ಹೇಳುತ್ತಿದ್ದೇನೆ. ರಾಜಕಾರಣ ಮಾಡುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.