ADVERTISEMENT

ಉಪ್ಪು ತಿಂದವರು ನೀರು ಕುಡಿಯಲೇಬೇಕು;ನಾವು ಯಾರನ್ನೂ ರಕ್ಷಿಸುವುದಿಲ್ಲ:ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 7:01 IST
Last Updated 18 ಜನವರಿ 2026, 7:01 IST
   

ಮೈಸೂರು: ‘ಉಪ್ಪು ತಿಂದವರು ನೀರು ಕುಡಿಯಲೇಬೇಕು. ನಾವು ಯಾರ ರಕ್ಷಣೆಯನ್ನೂ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮದ್ಯ ಮಾರಾಟ ಸನ್ನದು ನೀಡಲು ₹ 25 ಲಕ್ಷ ಲಂಚ ಪಡೆಯುತ್ತಿದ್ದ ಬೆಂಗಳೂರು ಅಬಕಾರಿ ಜಿಲ್ಲೆ–8ರ ಅಬಕಾರಿ ಉಪ ಆಯುಕ್ತ (ಡಿಸಿ) ಜಗದೀಶ್ ನಾಯ್ಕ ಸೇರಿ ಮೂವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿರುವ ಬಗ್ಗೆ ಮೇಲಿನಂತೆ ಅವರು ಪ್ರತಿಕ್ರಿಯಿಸಿದರು.

ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಆಡಿಯೊದಲ್ಲಿ ಸಚಿವರ ಹೆಸರು ಪ್ರಸ್ತಾಪ‍ವಾಗಿರುವ ಬಗ್ಗೆ ನನಗೆ ಗೊತ್ತಿಲ್ಲ’ ಎಂದರು.

ADVERTISEMENT

‘ಬಿಜೆಪಿ ಸರ್ಕಾರದಲ್ಲಿ ಶೇ 40ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿದ್ದು ನಾನಲ್ಲ, ಗುತ್ತಿಗೆದಾರರು. ಅಂತಹ ಬಿಜೆಪಿಯವರು ನಮ್ಮ ಮೇಲೇನು ಆರೋಪಿಸುವುದು’ ಎಂದು ಪ್ರಶ್ನಿಸಿದರು.

ಬಳ್ಳಾರಿಯಲ್ಲಿ ನಡೆದ ಗಲಾಟೆಯ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂಬ ಬಿಜೆಪಿ ಆಗ್ರಹದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಸಿಬಿಐಗೆ ವಹಿಸುವಂತೆ ಕೇಳುವ ನೈತಿಕತೆ ಬಿಜೆಪಿಗೆ ಎಲ್ಲಿದೆ? ನಾನು ಏಳೆಂಟು ಪ್ರರಣಗಳನ್ನು ಸಿಬಿಐಗೆ ಕೊಟ್ಟಿದ್ದೇನೆ. ಒಂದೇ ಒಂದು ಕೇಸನ್ನಾದರೂ ಅವರು ನೀಡಿದ್ದರಾ ಹೇಳಿ? ಅವರೇನು ನಮಗೆ ಪಾಠ ಮಾಡುವುದು?’ ಎಂದು ಕೇಳಿದರು.

‘ಬಿಜೆಪಿಯ ಜನಾರ್ಧನ ರೆಡ್ಡಿಯದ್ದು ಗೂಂಡಾ ಸಂಸ್ಕೃತಿ. ಅವರಿಗೆ ಯಾವ ಸಂಸ್ಕಾರವೂ ಇಲ್ಲ. ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದು ಅವರೇ. ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿದ್ದಾಗ ಇಬ್ರಾಹಿಂ ಜೊತೆ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾಗ, ನಮಗೆ ಜಾಗ ಕೊಡಲಿಲ್ಲ. ಕೊನೆಗೆ ನಾವು‌ ಕುರುಬರ ದೇವಸ್ಥಾನದಲ್ಲಿ ನಿಂತು ಪ್ರಚಾರ ಮಾಡಿ ಬಂದೆವು. ಅಂತಹ ರೆಡ್ಡಿ ನಮಗೇನು ಪಾಠ ಮಾಡುತ್ತಾರೆ‌? ಎಂದರು.

ಶಾಸಕ ಡಿ.ರವಿಶಂಕರ್, ವಿಧಾನಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.