ADVERTISEMENT

Cough Syrup Safety: ಸಿರಪ್‌ ಮಾದರಿಗಳ ತಪಾಸಣೆ

ಆರೋಗ್ಯ ಇಲಾಖೆ ಕಾರ್ಯಾಚರಣೆ: ಪತ್ತೆಯಾಗಿಲ್ಲ ಹಾನಿಕಾರಕ ರಾಸಾಯನಿಕ

ಆರ್.ಜಿತೇಂದ್ರ
Published 7 ಅಕ್ಟೋಬರ್ 2025, 5:04 IST
Last Updated 7 ಅಕ್ಟೋಬರ್ 2025, 5:04 IST
   

ಮೈಸೂರು: ಹೊರ ರಾಜ್ಯಗಳಲ್ಲಿ ಕೆಲವು ಕೆಮ್ಮಿನ ಸಿರಪ್‌ ಬಳಕೆಯಿಂದ ಮಕ್ಕಳು ಸಾವನ್ನಪ್ಪಿದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಔಷಧಿಗಳ ತಪಾಸಣೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸದ್ಯ ಯಾವ ಸಿರಪ್‌ನಲ್ಲೂ ಮಿತಿಮೀರಿದ ಪ್ರಮಾಣದ ರಾಸಾಯನಿಕಗಳು ಪತ್ತೆಯಾಗಿಲ್ಲ.

ತಮಿಳುನಾಡಿನ ಕಂಪನಿಯೊಂದು ತಯಾರಿಸಿದ ಸಿರಪ್‌ನಲ್ಲಿ ಡೈ ಎಥಿಲಿನ್ ಗ್ಲೈಕಾಲ್ ಮೊದಲಾದ ಹಾನಿಕರ ರಾಸಾಯನಿಕ ಅಂಶ ಬಳಕೆಯಾಗಿದ್ದು, ಇದನ್ನು ಸೇವಿಸಿದವರಲ್ಲಿ ಕೆಲ ಮಕ್ಕಳು ಸಾವನ್ನಪ್ಪಿದ ಪ್ರಕರಣ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂತಹ ಸಿರಪ್‌ಗಳ ಬಳಕೆ ಮಾಡದಂತೆ ಮಾರ್ಗಸೂಚಿ ಹೊರಡಿಸಿದೆ.

‘ಜಿಲ್ಲೆಯ ವಿವಿಧೆಡೆ ಈಗಾಗಲೇ ತಪಾಸಣೆ ಕೈಗೊಂಡಿದ್ದೇವೆ. ವಿಶೇಷವಾಗಿ ಮಕ್ಕಳಿಗೆ ನೀಡಲಾಗುವ ವಿವಿಧ ಕಂಪನಿಗಳ ಕೆಮ್ಮಿನ ಸಿರಪ್‌ಗಳನ್ನು ಪರಿಶೀಲಿಸಿದ್ದೇವೆ. ಯಾವುದರಲ್ಲಿಯೂ ಹಾನಿಕಾರಕ ಅಂಶಗಳು ಪತ್ತೆಯಾಗಿಲ್ಲ. ಇಂತಹ ಔಷಧಗಳು ನಮ್ಮಲ್ಲಿ ಮೂರು ವರ್ಷದ ಹಿಂದೆಯೇ ನಿಷೇಧವಾಗಿವೆ. ಮಕ್ಕಳಿಗೆ ಕೆಮ್ಮು ನಿಯಂತ್ರಣಕ್ಕೆ ನೀಡಲಾಗುವ ಮಾತ್ರೆಗಳನ್ನೂ ಪರಿಶೀಲಿಸುತ್ತಿದ್ದೇವೆ. ತಪಾಸಣೆ ಮುಂದುವರಿಯಲಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರಸ್ವಾಮಿ.

ADVERTISEMENT

‘ಜಿಲ್ಲಾ ಔಷಧ ಉಗ್ರಾಣದಲ್ಲಿನ ಎಲ್ಲ ದಾಸ್ತಾನುಗಳನ್ನು ಪರಿಶೀಲಿಸಿದ್ದೇವೆ. ಜೊತೆಗೆ ವಿಡಿಯೊ ಕಾನ್ಫರೆನ್ಸ್‌ಗಳ ಮೂಲಕ ಸಂಬಂಧಿಸಿದ ಆಸ್ಪತ್ರೆಗಳು, ವೈದ್ಯರ ಜೊತೆಗೂ ಸಂವಹನ ನಡೆಸಿದ್ದೇವೆ’ ಎನ್ನುತ್ತಾರೆ ಅವರು.

ಎಚ್ಚರ ಅಗತ್ಯ:

‘ಯಾವುದೇ ಔಷಧ ಬಳಕೆಗೂ ಮುನ್ನ ಸಾರ್ವಜನಿಕರು ಕಡ್ಡಾಯವಾಗಿ ವೈದ್ಯರ ಸಲಹೆ ಪಡೆಯಬೇಕು. ವೈದ್ಯರು ಶಿಫಾರಸು ಮಾಡಿದ ಔಷಧಗಳನ್ನು ಮಾತ್ರ ಬಳಸಬೇಕು. ಅದರಲ್ಲಿಯೂ ಮಕ್ಕಳ ಔಷಧ ಬಳಕೆಯಲ್ಲಿ ಜಾಗ್ರತೆ ವಹಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.