ADVERTISEMENT

ಮೈಸೂರು: ಆಮಂತ್ರಣ ಪತ್ರಿಕೆಯಲ್ಲೂ ಕೋವಿಡ್ ಜಾಗೃತಿ

ದಸರಾ ಉನ್ನತಾಧಿಕಾರ ಸಮಿತಿ ಸಭೆಯಲ್ಲೇ ನಿರ್ಧಾರ; ಜಿಲ್ಲಾಡಳಿತದ ಹಲವು ಸಭೆಗಳಲ್ಲಿ ಸಹಮತ

ಡಿ.ಬಿ, ನಾಗರಾಜ
Published 16 ಅಕ್ಟೋಬರ್ 2020, 1:51 IST
Last Updated 16 ಅಕ್ಟೋಬರ್ 2020, 1:51 IST
ದಸರಾ ಆಮಂತ್ರಣ ಪತ್ರಿಕೆಯಲ್ಲಿ ಕೋವಿಡ್ ಜಾಗೃತಿ ಸಂದೇಶ
ದಸರಾ ಆಮಂತ್ರಣ ಪತ್ರಿಕೆಯಲ್ಲಿ ಕೋವಿಡ್ ಜಾಗೃತಿ ಸಂದೇಶ   

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ–2020ರ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿದೆ. ಇದರಲ್ಲಿ ಹತ್ತು ದಿನ ನಡೆಯುವ ದಸರಾ ಕಾರ್ಯಕ್ರಮಗಳ ಪಟ್ಟಿಯ ಜೊತೆಗೆ ಕೋವಿಡ್ ಜಾಗೃತಿಯ ಸಂದೇಶವೂ ಅಡಕಗೊಂಡಿರುವುದು ವಿಶೇಷ.

ಕೋವಿಡ್–19 ಕುರಿತಂತೆ ಹಾಗೂ ಈ ಸೋಂಕು ಜನರಿಗೆ ಹರಡದಂತೆ ಸಮುದಾಯದಲ್ಲಿ ಜಾಗೃತಿ ಮೂಡಿಸಲಿಕ್ಕಾಗಿ ದಸರಾ ಆಮಂತ್ರಣ ಪತ್ರಿಕೆಯಲ್ಲಿ ಒಂದು ಪುಟವನ್ನೇ ಮೀಸಲಿಡಲಾಗಿದೆ. ಇದನ್ನು ಸುಂದರವಾಗಿ ವಿನ್ಯಾಸಗೊಳಿದ್ದು, ಮನಮುಟ್ಟುವ ಜಾಗೃತಿ ಸಂದೇಶಗಳು ಇದರಲ್ಲಿ ಪ್ರಕಟಗೊಂಡಿವೆ.

‘ಇದು ಜೀವ ಉಳಿಸಿಕೊಳ್ಳುವ ವರ್ಷ. ಅಂತರ ಕಾಪಾಡಿಕೊಂಡರೆ ಮುಂದೆ ಬರಲಿದೆ ಹರ್ಷ. ಕನಿಷ್ಠ ಅಂತರ ಪಾಲಿಸೋಣ. ಸರಳ ದಸರಾ ಆಚರಿ ಸೋಣ’ ಎಂಬ ಘೋಷ ವಾಕ್ಯಗಳು ಕೋವಿಡ್‌ ಜಾಗೃತಿ ಮೂಡಿಸುವ ಪುಟದಲ್ಲಿವೆ.

ADVERTISEMENT

‘ಕಡ್ಡಾಯವಾಗಿ ಮಾಸ್ಕ್ ಧರಿಸಿ: ಜೀವನಕ್ಕಿಂತ ಜೀವ ಮುಖ್ಯ. ಜೀವ ಮೊದಲು ಜೀವನ ನಂತರ. ಮಾಸ್ಕ್‌ ಹಾಕಿಕೊಳ್ಳಿ, ಜೀವ ಉಳಿಸಿಕೊಳ್ಳಿ.

ಸ್ಯಾನಿಟೈಸರ್ ಬಳಸಿ: ಆಗಾಗ ಕೈ ತೊಳೆಯಿರಿ. ಅದು ಭವಿಷ್ಯದಲ್ಲಿ ನಿಮ್ಮ ಕೈ ಹಿಡಿಯುತ್ತದೆ.

ಅಂತರ ಪಾಲಿಸಿ: ಯಾರ ಕೈ ಕುಲಕಬೇಡಿ. ದೂರದಿಂದಲೇ ಕೈಜೋಡಿಸಿ ನಮಿಸಿ’ ಎಂಬ ಘೋಷ ವಾಕ್ಯಗಳು ದಸರಾ ಆಮಂತ್ರಣ ಪತ್ರಿಕೆಯ ಕೋವಿಡ್ ಜಾಗೃತಿ ಮೂಡಿಸುವ ಪುಟದಲ್ಲಿ ರಾರಾಜಿಸುತ್ತಿವೆ.

ಸಾಮೂಹಿಕ ನಿರ್ಧಾರ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಒಂದೂವರೆ ತಿಂಗಳ ಹಿಂದೆಯೇ ದಸರಾ ಉನ್ನತಾಧಿಕಾರ ಸಮಿತಿಯ ಸಭೆ ನಡೆದಾಗಲೇ, ಕೋವಿಡ್ ಜಾಗೃತಿ ಮೂಡಿಸುವ ಸಂದೇಶ ದಸರಾ ಆಮಂತ್ರಣ ಪತ್ರಿಕೆಯಲ್ಲಿರಬೇಕು ಎಂಬುದು ನಿರ್ಧರಿತವಾಗಿತ್ತು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಇದು ಒಬ್ಬಿಬ್ಬರ ಸಲಹೆ, ನಿರ್ಧಾರ ವಲ್ಲ. ಮುಖ್ಯಮಂತ್ರಿ, ಹಿರಿಯ ಸಚಿವರು, ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಸಾಮೂಹಿಕ ನಿರ್ಧಾರ ಎಂಬುದು ಗೊತ್ತಾಗಿದೆ.

‘ಕೋವಿಡ್‌ ಜೊತೆಗೆ ಬದುಕಬೇಕಿದೆ. ಜೀವ–ಜೀವನವೂ ಮುಖ್ಯ ಎಂದು ಪ್ರಧಾನಿಯವರು ಹೇಳಿ ತಿಂಗಳು ಗತಿಸಿದೆ. ದಸರಾ ಆಚರಣೆ ಬೇಕೋ–ಬೇಡವೋ ಎಂಬ ಚರ್ಚೆಯ ನಡುವೆಯೇ ಸಂಪ್ರದಾಯಕ್ಕೆ ಚ್ಯುತಿಯಾಗದಂತೆ ಸರಳ ದಸರಾ ಆಚರಿಸಲಾಗುತ್ತಿದೆ. ಈ ಸಂದರ್ಭ ಅವಕಾಶ ಸಿಕ್ಕ ಕಡೆ ಕೋವಿಡ್‌ ಜಾಗೃತಿ ಮೂಡಿಸುವ ಯತ್ನವನ್ನು ನಡೆಸಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.