ADVERTISEMENT

ದಸರಾ ಪ್ರಾಧಿಕಾರ ರಚಿಸಿ: ಆಗ್ರಹ

ದಸರಾ ಮಹೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 14:42 IST
Last Updated 12 ಅಕ್ಟೋಬರ್ 2020, 14:42 IST

ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು ಹಾಗೂ ದಸರಾ ಪ್ರಾಧಿಕಾರ ರಚಿಸಬೇಕು ಎಂದು ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟ ರಾಜ್ಯ ಸರ್ಕಾರವನ್ನು ಒತ್ತಾಯಿಸಿತು.

ವರ್ಷಗಳು ಕಳೆದಂತೆ, ಸರ್ಕಾರಗಳು ಬದಲಾದಂತೆ ದಸರಾ ಆಚರಣೆಗೆ ತಾತ್ಸಾರ ಮನೋಭಾವನೆ ವ್ಯಕ್ತವಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ದರಾಜು ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಕೊರೊನಾ ವೈರಸ್‌ನ ಸಾಂಕ್ರಾಮಿಕ ಪಿಡುಗಿನಿಂದ ನಾಡು ಮತ್ತು ದೇಶ ಬಸವಳಿದಿರುವ ಈ ಹೊತ್ತಿನಲ್ಲಿ ಜನರ ಅಭಿಪ್ರಾಯವನ್ನು ಕೇಳದ ಸರ್ಕಾರ ಸರಳ ದಸರಾ ಆಚರಣೆಗೆ ಮುಂದಾಗಿದೆ. ಈ ಸಂದರ್ಭ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ, ಖ್ಯಾತಿ ಪಡೆದಿರುವ ಸ್ಥಳೀಯ ಕಲಾವಿದರ ಪ್ರದರ್ಶನಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಕಲಾವಿದರ ನೆರವಿಗೆ ಬರಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

ಕೋವಿಡ್‌ನಿಂದ ತೀರಾ ಸಂಕಷ್ಟಕ್ಕೆ ಒಳಗಾಗಿರುವ ಈ ಸಂದರ್ಭದಲ್ಲಿ ಕಲಾವಿದರಿಗೆ ಹೆಚ್ಚಿನ ಗೌರವ ಸಂಭಾವನೆ ನೀಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರನ್ನು ಆಯ್ಕೆ ಮಾಡಬೇಕು. ದಸರಾದಲ್ಲಿ ಭಾಗವಹಿಸುವ ಸಾಹಿತಿ, ಕಲಾವಿದರಿಗೆ ವಸತಿ, ಊಟ ಮತ್ತು ಸಾರಿಗೆ ಸೌಕರ್ಯ ಒದಗಿಸಬೇಕು. ಜೊತೆಗೆ ದಸರಾ ರಾಷ್ಟ್ರೀಯ ಹಬ್ಬ ಆಗಿರುವುದರಿಂದ ಪ್ರತಿ ವರ್ಷವೂ ವ್ಯವಸ್ಥಿತವಾಗಿ ಆಚರಿಸಲು ದಸರಾ ಪ್ರಾಧಿಕಾರ ರಚಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಒಕ್ಕೂಟದ ಉಪಾಧ್ಯಕ್ಷ ಡಾ.ವಸಂತಕುಮಾರ್, ಸಂಚಾಲಕ ಕಿಲಾರೆ ಮಹೇಶ್, ಡಾ.ಬಸವರಾಜು, ರೇವಣ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.