ಮೈಸೂರು: ನಗರದಲ್ಲಿ ನಡೆದ ಎರಡು ಅಪರಾಧ ಪ್ರಕರಣಗಳು ದಸರಾ ಸಂಭ್ರಮವನ್ನು ಕ್ಷಣಾರ್ಧದಲ್ಲಿ ಕಸಿದಿದ್ದು, ಭಯದ ವಾತಾವರಣ ಮೂಡಿಸಿದೆ.
ವಸ್ತುಪ್ರದರ್ಶನ ಮೈದಾನದ ಬಳಿ ಮಂಗಳವಾರ ಬೆಳಿಗ್ಗೆ ಗಿಲ್ಕಿ ವೆಂಕಟೇಶ್‌ನನ್ನು ಕಾರಿನಿಂದ ಎಳೆದು ಹಾಕಿ ಆರು ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಯುತ್ತಿದ್ದಂತೆ ಕೊಲೆ ನಡೆದ ಸ್ಥಳದ 100 ಮೀ. ಅಂತರದಲ್ಲಿ ಬಾಲಕಿಯನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿದ ಘಟನೆ ನಡೆದಿದೆ. ಇದು ಸಹಜವಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ನಗರದ ಹೃದಯ ಭಾಗದಲ್ಲಿ ಅರಮನೆಯ ಬಳಿಯಿರುವ ವಸ್ತುಪ್ರದರ್ಶನ ಮಳಿಗೆ ಜನಪ್ರಿಯವಾಗಿದೆ. ಇಲ್ಲಿಗೆ ಬರುವವರ ವಾಹನಗಳ ನಿಲುಗಡೆಗಾಗಿ ವಿಸ್ತಾರವಾದ ಜಾಗವನ್ನು ನಿರ್ಮಿಸಲಾಗಿದೆ. ಆದರೆ ಮಧ್ಯರಾತ್ರಿಯ ಬಳಿಕ ಇದು ಮದ್ಯವ್ಯಸನಿಗಳ ತಾಣವಾಗಿ ಗುರುತಿಸಿಕೊಂಡಿದೆ.
ವಸ್ತುಪ್ರದರ್ಶನ ಮೈದಾನದ ಸುತ್ತಲಿನ ರಸ್ತೆಗಳಲ್ಲೂ ಇದೇ ಪರಿಸ್ಥಿತಿಯಿದೆ. ತಡರಾತ್ರಿಯವರೆಗೂ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಮದ್ಯಪಾನ ಮಾಡುತ್ತಾರೆ. ಕೂಗಳತೆ ದೂರದಲ್ಲಿ ಕಮಿಷನರ್ ಕಚೇರಿ, ನಜರ್‌ಬಾದ್ ಠಾಣೆ ಇದ್ದು, ಪೊಲೀಸರು ಈ ಬಗ್ಗೆ ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
‘ಮಧ್ಯರಾತ್ರಿಯ ಬಳಿಕ ಬೆಳಿಗ್ಗೆವರೆಗೂ ಪಾರ್ಕಿಂಗ್ ಸ್ಥಳದಲ್ಲಿ ಗುಂಪು, ಗುಂಪಾಗಿ ಜನರು ಬರುತ್ತಾರೆ. ಕೆಲವೊಮ್ಮೆ ಕಿರುಚಾಡುತ್ತಾ ತೊಂದರೆಯನ್ನೂ ನೀಡುತ್ತಾರೆ. ಸದ್ಯ ನಗರದಲ್ಲಿ ರಾತ್ರಿಯಾದ ಬಳಿಕ ಓಡಾಟ ಇಲ್ಲದ ಜಾಗವಾಗಿ ದೊಡ್ಡಕೆರೆ ಮೈದಾನದ ಪಾರ್ಕಿಂಗ್ ಗುರುತಿಸಿಕೊಂಡಿದ್ದು, ಪುಂಡರು ಇಲ್ಲಿ ಬೀಡು ಬಿಡುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪೊಲೀಸ್ ಇಲಾಖೆಯು ಈ ಭಾಗದಲ್ಲಿ ಗಸ್ತು ತಿರುಗಿ, ಪುಂಡರ ಹಾವಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಅವರು ಸಾರ್ವಜನಿಕರಿಗೆ ತೊಂದರೆ ನೀಡುವ ಸಾಧ್ಯತೆಯಿದೆ. ಸ್ಥಳೀಯ ಮನೆಯವರು ಈಗಾಗಲೇ ಹಿಂಸೆ ಅನುಭವಿಸುತ್ತಿದ್ದು, ಸಂಬಂಧಪಟ್ಟವರು ಗಮನಹರಿಸಬೇಕು’ ಎಂದು ಆಗ್ರಹಿಸಿದರು.
ದಸರಾ ಅಂಗವಾಗಿ ಆರಂಭವಾಗಿರುವ ವಸ್ತುಪ್ರದರ್ಶನವು ಸುಮಾರು ಒಂದು ತಿಂಗಳಿಗಿಂತಲೂ ಹೆಚ್ಚಿನ ಕಾಲ ಮುಂದುವರಿಯಲಿದೆ. ಹೀಗಾಗಿ ಈ ಭಾಗದಲ್ಲಿ ಜನರ ಓಡಾಟವೂ ಹೆಚ್ಚಿರುತ್ತದೆ. ಪೊಲೀಸ್ ಇಲಾಖೆಯು ವಸ್ತುಪ್ರದರ್ಶನ ಮೈದಾನದ ಸುತ್ತ ಹೆಚ್ಚಿನ ಭದ್ರತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹ.
- ತಡರಾತ್ರಿಯವರೆಗೂ ಮದ್ಯವ್ಯಸನಿಗಳ ಹಾವಳಿ ಪೊಲೀಸ್ ಬೀಟ್ ಹೆಚ್ಚಿಸಲು ಆಗ್ರಹ
‘ಅಪರಾಧಿಗೆ ಕಠಿಣ ಶಿಕ್ಷೆಯಾಗಲಿ’
‘ದೊಡ್ಡಕೆರೆ ಮೈದಾನದ ಬಳಿ ಬಾಲಕಿ ಶವವಾಗಿ ಪತ್ತೆಯಾಗಿರುವುದು ಆತಂಕಕಾರಿ ಬೆಳವಣಿಗೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಅಪರಾಧಿಗೆ ಕಾನೂನಿನಡಿ ಶಿಕ್ಷೆಯಾಗಬೇಕು’ ಎಂದು ಎಐಎಂಎಸ್‌ಎಸ್ ಸಂಘಟನೆ ಆಗ್ರಹಿಸಿದೆ. ‘ಜೀವನೋಪಾಯಕ್ಕೆ ನಾಡಹಬ್ಬ ದಸರಾ ವೇಳೆ ಬಲೂನು ಮಾರಿ ಬದುಕಲು ಬಂದಿದ್ದ ಕುಟುಂಬ ಇಂದು ತನ್ನ ಮಗಳನ್ನು ಕಳೆದುಕೊಂಡಿದೆ. ಒಂದೆಡೆ ಇವರಿಗೆ ಜೀವನದಲ್ಲಿ ಯಾವುದೇ ಭದ್ರತೆ ಇಲ್ಲದಿರುವುದು ವಿಷಾದನೀಯ. ಮತ್ತೊಂದೆಡೆ ಸಾಂಸ್ಕೃತಿಕ ನಗರಿ ವಿಶ್ರಾಂತ ನಗರ ಎಂದು ಹೆಸರುವಾಸಿ ಆಗಿರುವ ಮೈಸೂರು ನಗರದಲ್ಲಿ ಕೊಲೆ ದರೋಡೆ ಅತ್ಯಾಚಾರಗಳು ಅಸಹಜ ಸಾವುಗಳ ಘಟನೆ ದಿನನಿತ್ಯ ವರದಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಆಸಿಯಾ ಬೇಗಂ ಕಳವಳ ವ್ಯಕ್ತಪಡಿಸಿದರು.
‘ಮಾನ ಪ್ರಾಣ ರಕ್ಷಣೆಗೆ ಕ್ರಮವಹಿಸಿ’
‘ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಕೃತ್ಯವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ದಸರಾ ಮುಗಿದು ಪ್ರವಾಸಿಗರು ತಮ್ಮ ಮನೆಗಳನ್ನು ಸೇರುವ ಹೊತ್ತಿನಲ್ಲೇ ಮೈಸೂರಿನಲ್ಲಿ ಎರಡು ಕೊಲೆ ಪ್ರಕರಣಗಳು ನಡೆದಿರುವುದು ಮೈಸೂರು ಜನರಿಗೆ ತೀವ್ರ ಆತಂಕ ಹಾಗೂ ತಲೆತಗ್ಗಿಸುವ ವಿಚಾರವಾಗಿದೆ. ದಸರಾ ಸಂದರ್ಭದಲ್ಲಿ ಪೊಲೀಸರನ್ನು ನಿಯೋಜನೆ ಮಾಡುವ ಸರ್ಕಾರ ದಸರಾ ನಂತರದಲ್ಲಿ ಜನರ ಮಾನ ಪ್ರಾಣ ರಕ್ಷಣೆಗೆ ಸೂಕ್ತ ಕ್ರಮ ವಹಿಸಬೇಕು’ ಎಂದು ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಒತ್ತಾಯಿಸಿದರು.
‘ಮಕ್ಕಳ ಉದ್ಯಾನ ರಕ್ಷಿಸಿ’
ಕಮಿಷನರ್ ಕಚೇರಿ ಬಳಿ ಇರುವ ಮಕ್ಕಳ ಪಾರ್ಕ್‌ನಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಿದ್ದು ಇದನ್ನು ತಡೆಗಟ್ಟಲು ಪೊಲೀಸರು ಕ್ರಮವಹಿಸಬೇಕು’ ಎಂದು ಟೀಂ ಮೈಸೂರು ತಂಡದ ಗೋಕುಲ್ ಗೋವರ್ಧನ್ ತಿಳಿಸಿದರು. ‘ಈ ಉದ್ಯಾನದಲ್ಲಿ ಮದ್ಯ ಮಾದಕ ವ್ಯಸನಿಗಳು ಹೆಚ್ಚಾಗಿದ್ದಾರೆ. ಯುವಕ ಯುವತಿಯರು ಅನುಚಿತವಾಗಿ ವರ್ತಿಸುತ್ತಿದ್ದು ಉದ್ಯಾನ ನಿರ್ಮಾಣದ ಉದ್ದೇಶ ಈಡೇರಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.