
ಮೈಸೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಲಕ್ಷಗಟ್ಟಲೆ ಲಾಭ ಕೊಡುವುದಾಗಿ ಆಮಿಷವೊಡ್ಡಿದ ಸೈಬರ್ ವಂಚಕರು ಜೆ.ಪಿ.ನಗರದ ಮಹಿಳೆಯೊಬ್ಬರ ಬ್ಯಾಂಕ್ ಖಾತೆಗಳಿಂದ ₹ 1.58 ಕೋಟಿ ದೋಚಿದ್ದಾರೆ.
ವಾಟ್ಸ್‌ಆ್ಯಪ್ ಗ್ರೂಪ್‌ವೊಂದಕ್ಕೆ ಸೇರಿದಾಗ, ಹೂಡಿಕೆ ಮಾಡಿದರೆ ಲಾಭ ಸಿಗುವುದಾಗಿ ಸೈಬರ್ ವಂಚಕರು ನೀಡಿದ ಮಾಹಿತಿಯನ್ನು ಮಹಿಳೆ ನಂಬಿದ್ದಾರೆ. ಅದಕ್ಕಾಗಿ ‘ಸ್ಯಾಮ್ಕೋ ಟ್ರೇಡಿಂಗ್’ ಹಾಗೂ ‘ಟೆನ್‌ಕೋರ್’ ಎಂಬ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ವಂಚಕರು ತಿಳಿಸಿದ್ದಾರೆ. ಅದರಂತೆ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಮೊದಲು ₹ 60 ಸಾವಿರ ಹಣ ಹೂಡಿಕೆ ಮಾಡಿದ ಸಂತ್ರಸ್ತ ಮಹಿಳೆಯು, ಬರುತ್ತಿದ್ದ ಲಾಭಾಂಶವನ್ನು ನೋಡಿ ನಂತರ ಹಂತ ಹಂತವಾಗಿ ಎರಡು ಬ್ಯಾಂಕ್ ಖಾತೆಗಳಿಂದ ₹ 1,58,93,000 ಹಣವನ್ನು ಹೂಡಿಕೆ ಮಾಡಿದ್ದಾರೆ. ಲಾಭಾಂಶ ಬಂದಿರುವುದನ್ನು ಡ್ರಾ ಮಾಡಲು ಆ್ಯಪ್‌ಗೆ ಹೋದಾಗ ₹ 16 ಲಕ್ಷ ಮತ್ತೆ ಹೂಡಿಕೆ ಮಾಡುವಂತೆ ಮತ್ತೆ ವಂಚಕರು ಕೋರಿದ್ದಾರೆ. ಅನುಮಾನ ಬಂದು ಬ್ಯಾಂಕ್‌ಗಳಲ್ಲಿ ವಿಚಾರಿಸಿದಾಗ, ಹಣ ವರ್ಗಾವಣೆಯಾಗಿದ್ದು ಕಂಡುಬಂದಿದೆ.
ಮೋಸ ಹೋದ ಬಗ್ಗೆ ನಗರದ ಸೈಬರ್ ಠಾಣೆಯಲ್ಲಿ ಮಹಿಳೆಯು ಶನಿವಾರ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
₹ 6.94 ಲಕ್ಷ ನಾಪತ್ತೆ: ನಗರದ ಮಂಚೇಗೌಡನ ಕೊಪ್ಪಲಿನ ವೃದ್ಧೆಯೊಬ್ಬರ ಬ್ಯಾಂಕ್ ಖಾತೆಯಿಂದ ₹ 6.94 ಲಕ್ಷ ನಾಪತ್ತೆಯಾಗಿದ್ದು, ಅಪರಿಚಿತ ವ್ಯಕ್ತಿಯೊಬ್ಬರು ವಿವಿಧ ಹಂತಗಳಲ್ಲಿ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆಂದು ಅವರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.
ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ದೂರು: ‘ಬ್ಯಾಂಕ್ ಲಾಕರ್‌ನಲ್ಲಿ ಇರಿಸಿದ್ದ ಚಿನ್ನಾಭರಣವನ್ನು ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯೇ ಕಳವು ಮಾಡಿದ್ದಾರೆ’ ಎಂದು ಆರೋಪಿಸಿ ಗ್ರಾಹಕರೊಬ್ಬರು ದೂರು ನೀಡಿದ್ದು, ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್‌ಒಯು ಆವರಣದ ಎಸ್‌ಬಿಐ ಬ್ಯಾಂಕ್‌ನ ಲಾಕರ್‌ನಲ್ಲಿ 79 ಗ್ರಾಂ. ಚಿನ್ನಾಭರಣವನ್ನು ವಿಜಯನಗರ 3ನೇ ಹಂತದ ನಿವಾಸಿ ಜಮುನಾ ಎಂಬುವರು ಇಟ್ಟಿದ್ದರು. ಅ.23ರಂದು ಪರಿಶೀಲಿಸಿದಾಗ ಚಿನ್ನಾಭರಣಗಳು ಇರಲಿಲ್ಲ. ವ್ಯವಸ್ಥಾಪಕರ ವಿರುದ್ಧ ಅವರು ದೂರು ನೀಡಿದ್ದಾರೆ.
ಮೂವರ ರಕ್ಷಣೆ: ವಿಜಯನಗರ ವಾಟರ್ ಟ್ಯಾಂಕ್ ಬಳಿಯ ‘ಸ್ಪಾ’ವೊಂದರ ಮೇಲೆ ದಾಳಿ ನಡೆಸಿದ ವಿಜಯನಗರ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು, ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿವಾಲ್ವರ್ ನಾಪತ್ತೆ: ದೂರು ‘ಕಾರಿನಲ್ಲಿ ಇಟ್ಟಿದ್ದ ರಿವಾಲ್ವರ್ ಹಾಗೂ 8 ಸಜೀವ ಗುಂಡು ನಾಪತ್ತೆಯಾಗಿವೆ’ ಎಂದು ಕುಶಾಲನಗರ ನಿವಾಸಿ ತಿಮ್ಮಯ್ಯ ಎಂಬುವರು ಎನ್.ಆರ್. ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ‘ಕಾರ್ ರಿಪೇರಿಗೆಂದು ಅ.23ರಂದು ಮೈಸೂರಿಗೆ ಬಂದಿದ್ದು ಹೈವೇ ವೃತ್ತದ ಸಮೀಪದ ಗ್ಯಾರೇಜ್‌ಗೆ ಬಿಡಲಾಗಿತ್ತು. ಕಾರು ವಾಪಸ್ ಪಡೆದಾಗ ರಿವಾಲ್ವರ್ ನಾಪತ್ತೆಯಾಗಿದೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಚಿನ್ನಾಭರಣ ಕಳವು
ದಟ್ಟಗಳ್ಳಿ ನಿವಾಸಿ ಆದರ್ಶ್ ಎಂಬುವರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ₹ 1 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಿದ್ದು ವಾಪಸ್ ಬಂದಾಗ ಕಳವು ಮಾಡಿರುವುದು ಗೊತ್ತಾಗಿದೆ. ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ನಾಗನಹಳ್ಳಿ ಬಡಾವಣೆಯ ಮಂಜುನಾಥ್ ಎಂಬುವರ ಮನೆ ಬೀಗ ಒಡೆದು ನುಗ್ಗಿದ ಕಳ್ಳರು ₹ 4.96 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ತಂದೆಯ ವರ್ಷದ ತಿಥಿ ಕಾರ್ಯ ನಡೆಸಲು ತಾಯಿ ಮನೆಗೆ ತೆರಳಿದ್ದಾಗ ಕೃತ್ಯ ನಡೆದಿದ್ದು ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.