ADVERTISEMENT

ನಗರದಲ್ಲಿ ದೇವರಾಜ ಅರಸು ಸ್ಮರಣೆ, ಪ್ರತಿಮೆ ಸ್ಥಾಪನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 1:33 IST
Last Updated 7 ಜೂನ್ 2021, 1:33 IST
ದೇವರಾಜ ಅರಸು ಪ್ರತಿಷ್ಠಾಪನಾ ಸಮಿತಿ ವತಿಯಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪುಣ್ಯಸ್ಮರಣೆ ಅಂಗವಾಗಿ ಮೈಸೂರಿನಲ್ಲಿ ಅವರ ಭಾವಚಿತ್ರಕ್ಕೆ ಭಾನುವಾರ ಪುಷ್ಪನಮನ ಸಲ್ಲಿಸಲಾಯಿತು. ಕೆ‍ಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ.ಆರ್. ಅರಸು, ಎಂ.ಚಂದ್ರಶೇಖರ್‌, ಜಾಕಿರ್‌ ಹುಸೇನ್‌ ಇದ್ದಾರೆ
ದೇವರಾಜ ಅರಸು ಪ್ರತಿಷ್ಠಾಪನಾ ಸಮಿತಿ ವತಿಯಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪುಣ್ಯಸ್ಮರಣೆ ಅಂಗವಾಗಿ ಮೈಸೂರಿನಲ್ಲಿ ಅವರ ಭಾವಚಿತ್ರಕ್ಕೆ ಭಾನುವಾರ ಪುಷ್ಪನಮನ ಸಲ್ಲಿಸಲಾಯಿತು. ಕೆ‍ಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ.ಆರ್. ಅರಸು, ಎಂ.ಚಂದ್ರಶೇಖರ್‌, ಜಾಕಿರ್‌ ಹುಸೇನ್‌ ಇದ್ದಾರೆ   

ಮೈಸೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪ್ರತಿಮೆಯನ್ನು ನಗರದಲ್ಲಿ ಸ್ಥಾಪಿಸಬೇಕು ಎಂದು ಶಾಸಕ ತನ್ವೀರ್‌ ಸೇಠ್ ಒತ್ತಾಯಿಸಿದರು.

ಇಲ್ಲಿನ ಡಿ.ದೇವರಾಜ ಅರಸು ರಸ್ತೆಯಲ್ಲಿ ಭಾನುವಾರ ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರ ಪ್ರತಿಮೆ ನಿರ್ಮಾಣ ಸಮಿತಿ ಏರ್ಪಡಿಸಿದ್ದ ಡಿ.ದೇವರಾಜ ಅರಸು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಮಹಾರಾಣಿ ಕಾಲೇಜು ಸಮೀಪದ ಸಿಗ್ನಲ್‌ ಬಳಿ ಪ್ರತಿಮೆ ಸ್ಥಾಪಿಸಬೇಕಿದೆ. ಇದಕ್ಕಾಗಿ ಎಲ್ಲರೂ ಒಮ್ಮನಸ್ಸಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ADVERTISEMENT

ಪ್ರತಿಮೆ ಸ್ಥಾಪನೆಗೆ ಅನೇಕ ವರ್ಷಗಳಿಂದಲೂ ಬೇಡಿಕೆ ಇದೆ. ಆದರೆ, ಇನ್ನೂ ಇದು ಸಾಕಾರವಾಗಿಲ್ಲ. ಇನ್ನಾದರೂ, ಸರ್ಕಾರ ವಿಳಂಬ ಮಾಡದೇ ಕಾರ್ಯೋನ್ಮುಖವಾಗಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ‘ದೇವರಾಜಅರಸು ಅವರು ಹಿಂದುಳಿದ ವರ್ಗಗಳು, ದಲಿತರು, ಅಶಕ್ತರು ಮತ್ತು ತುಳಿತಕ್ಕೊಳಪಟ್ಟ ಸಮಾಜಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರಮಿಸಿದರು. ಉಳುವವರಿಗೆ ಭೂಮಿ ಕಾನೂನು ಜಾರಿಗೆ ತಂದು ನೊಂದವರ ಪಾಲಿನ ದೇವರಾಗಿ ಉಳಿದರು’ ಎಂದು ಶ್ಲಾಘಿಸಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ‘ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಹರಿಕಾರ. ಅವರ ಪ್ರತಿಮೆ ಸ್ಥಾಪಿಸಬೇಕು ಎಂಬ ಬಹು ದಿನದ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡರಾದ ಮಂಜುಳಾ ಮಾನಸ, ಡಾ.ಡಿ.ತಿಮ್ಮಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸು, ದೇವರಾಜ ಅರಸು ಪ್ರತಿಷ್ಟಾಪನಾ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್, ರಾಜ್ಯ ಸಂಚಾಲಕ ಡೈರಿ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.