ಸಾಂದರ್ಭಿಕ ಚಿತ್ರ
ಮೈಸೂರು: ‘ನಮ್ಮ ಸಮುದಾಯದವರೇ ನಮ್ಮನ್ನು ಬಹಿಷ್ಕರಿಸಿದ್ದಾರೆ. ಯಾರೂ ಮಾತನಾಡಿಸುತ್ತಿಲ್ಲ. ಕೂಲಿಗಾಗಿ ಪಕ್ಕದೂರಿಗೆ ಹೋಗುವಂತಾಗಿದೆ. ಈ ಕಟ್ಟು ಅಳಿಯುವಂತೆ ಮಾಡಿಕೊಡಿ. ಇಲ್ಲದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳದೇ ಬೇರೇನೂ ಕಾಣುತ್ತಿಲ್ಲ’
–ನಂಜನಗೂಡು ತಾಲ್ಲೂಕಿನ ಶಿರಮಳ್ಳಿಯ ದಲಿತ ಸಮುದಾಯದ ರತ್ನಮ್ಮ, ಅವರ ತಾಯಿ ಪುಟ್ಟಸಿದ್ದಮ್ಮ, ನಾದಿನಿ ನಾಗಮಣಿ ಅವರು, ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೀಗೆ ಅಳಲು ತೋಡಿಕೊಂಡರು. ‘ಹಳೆ ದ್ವೇಷದಲ್ಲಿ, ಸಲ್ಲದ ಆರೋಪ ಹೊರಿಸಿ ಬಹಿಷ್ಕರಿಸಿರುವ ಬಗ್ಗೆ ದೂರು ನೀಡಿದರೂ ಪೊಲೀಸರು, ಶಾಸಕರು, ಅಧಿಕಾರಿಗಳಿಂದ ಪ್ರಯೋಜನವಾಗಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
₹ 1 ಲಕ್ಷ ದಂಡ: ‘ಏ.27ರಂದು ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಡಿ.ಜೆ ವಾಹನವನ್ನು ಪೊಲೀಸರು ತಡೆದಿದ್ದರು. ಅದಕ್ಕೆ ನಾನು ದೂರು ನೀಡಿದ್ದೇ ಕಾರಣವೆಂಬ ಸುಳ್ಳು ಆರೋಪ ಮಾಡಿ, ನಮ್ಮದೇ ಸಮುದಾಯದವರಾದ ಮಹದೇವಸ್ವಾಮಿ, ಶಿವರಾಜು, ಸಿದ್ದರಾಜು, ಹುಚ್ಚಯ್ಯ, ಸುರೇಶ ಅವರು ಬಹಿಷ್ಕಾರ ಹಾಕಿದ್ದಾರೆ. ಗ್ರಾಮಕ್ಕೆ ಸೇರಿಕೊಳ್ಳಲು ₹ 1 ಲಕ್ಷ ದಂಡ ಕಟ್ಟಬೇಕೆನ್ನುತ್ತಿದ್ದಾರೆ. ನಮ್ಮನ್ನು ಮಾತನಾಡಿಸಿದವರಿಗೂ ₹ 5 ಸಾವಿರ ದಂಡ ಹಾಕುತ್ತಿದ್ದಾರೆ’ ಎಂದು ರತ್ನಮ್ಮ ಆರೋಪಿಸಿದರು.
‘ಶಾಸಕರು, ಪಿಡಿಒ, ತಹಶೀಲ್ದಾರ್, ಜಿಲ್ಲಾಧಿಕಾರಿ, ಮಹಿಳಾ ಪೊಲೀಸ್ ಠಾಣೆ, ಎಸ್.ಪಿ ಅವರಿಗೂ ದೂರು ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಹುಲ್ಲಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಅವರೂ ಕಿರುಕುಳ ನೀಡಿದವರೊಂದಿಗೆ ಶಾಮೀಲಾಗಿದ್ದಾರೆ. ದಲಿತ ಸಂಘಟನೆಯವರೂ ನೆರವಿಗೆ ಬಂದಿಲ್ಲ’ ಎಂದರು.
ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ವಿಷಯ ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಕ್ರಮವಹಿಸುವೆ.-ಎನ್.ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.