ADVERTISEMENT

‘ಸಾಮಾಜಿಕ ವ್ಯವಸ್ಥೆಯ ಅರಿವೇ ಶಿಕ್ಷಣ’

ವಿಧಾನಪರಿಷತ್‌ ಸದಸ್ಯ ಕೆ. ಶಿವಕುಮಾರ್‌ಗೆ ಅಭಿನಂದನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 4:44 IST
Last Updated 7 ಜನವರಿ 2026, 4:44 IST
<div class="paragraphs"><p>ಸೆನೆಟ್ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೆ. ಶಿವಕುಮಾರ್ ಹಾಗೂ ಸರಸ್ವತಿ ದಂಪತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು</p></div>

ಸೆನೆಟ್ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೆ. ಶಿವಕುಮಾರ್ ಹಾಗೂ ಸರಸ್ವತಿ ದಂಪತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು

   

ಮೈಸೂರು: ‘ಸಾಮಾಜಿಕ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವುದೇ ನಿಜವಾದ ಶಿಕ್ಷಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮಂಗಳವಾರ ಕೆ. ಶಿವಕುಮಾರ್ ಅಭಿನಂದನಾ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ನೂತನ ಸದಸ್ಯ ಕೆ. ಶಿವಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದರು.

ADVERTISEMENT

‘ಜಾತಿ ಮತ್ತು ಚಾತುರ್ವರ್ಣ ವ್ಯವಸ್ಥೆಗೆ ಪರಿಹಾರಗಳನ್ನು ಕಂಡುಕೊಳ್ಳಬೇಕು. ಇವುಗಳನ್ನು ತಿಳಿದುಕೊಳ್ಳದೆ ಹೋದರೆ ವೈಚಾರಿಕ, ವೈಜ್ಞಾನಿಕ, ಐತಿಹಾಸಿಕ ಜ್ಞಾನ ಪಡೆದುಕೊಳ್ಳಲಾಗುವುದಿಲ್ಲ. ವೈಚಾರಿಕ, ವೈಜ್ಞಾನಿಕ ಶಿಕ್ಷಣ ಸಿಗದೇ ಹೋದರೆ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿರುವ ಕಂದಾಚಾರ ಹಾಗೂ ಮೌಢ್ಯಗಳಿಗೆ ದಾಸರಾಗುತ್ತೇವೆ’ ಎಂದರು.

‘ದಲಿತರು ಪತ್ರಕರ್ತರಾಗುವುದು ಬಹಳ ಅಪರೂಪ. ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿಯವರು ಪತ್ರಕರ್ತರಾಗಿದ್ದರು. ಎಲ್ಲರೂ ಅವರಂತಾಗಲು ಸಾಧ್ಯವಿಲ್ಲ. ಆದರೆ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಅದನ್ನು ಶಿವಕುಮಾರ್ ಅವರು ಮಾಡಿಕೊಂಡು ಬಂದಿದ್ದಾರೆ. ಅವರು ಅವಕಾಶ ವಂಚಿತರ ಪರವಾಗಿ ಇನ್ನಷ್ಟು ಕೆಲಸ ಮಾಡಲಿ’ ಎಂದು ಆಶಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಸಂಸ ಮುಖಂಡ ಹರಿಹರ ಆನಂದಸ್ವಾಮಿ, ‘ಈಚಿನ ದಿನಗಳಲ್ಲಿ ಒಳ ಮೀಸಲಾತಿ ಗೊಂದಲ ಮುಂದುವರಿದಿದ್ದು, ಸರ್ಕಾರ ಅದನ್ನು ಬಗೆಹರಿಸಬೇಕು’ ಎಂದು ಕೋರಿದರು.

ಶಿವಕುಮಾರ್ ಅವರ ಕುರಿತು ಪ್ರಧಾನ ಭಾಷಣ ಮಾಡಿದ ಪತ್ರಕರ್ತ ಕೃಷ್ಣಪ್ರಸಾದ್, ‘ಪಿ. ರಾಮಯ್ಯ ನಂತರದಲ್ಲಿ ಮತ್ತೊಬ್ಬ ಇಂಗ್ಲಿಷ್ ಮಾಧ್ಯಮ ಪತ್ರಕರ್ತನಿಗೆ ಈ ಅವಕಾಶ ಒದಗಿದೆ. ಅದರಲ್ಲೂ ಶೋಷಿತ ಸಮುದಾಯಕ್ಕೆ ಸೇರಿದ ಪತ್ರಕರ್ತನನ್ನು ಈ ಹುದ್ದೆಗೆ ಆಯ್ಕೆ ಮಾಡುವ ಮೂಲಕ ಸಿದ್ದರಾಮಯ್ಯ ಸಮಾಜಕ್ಕೆ ಪ್ರಬಲ ಸಂದೇಶ ನೀಡಿದ್ದಾರೆ’ ಎಂದರು.

‘ಮೈಸೂರು ವಿಶ್ವವಿದ್ಯಾಲಯ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದು, ಅದರ ಪುನಶ್ಚೇತನಕ್ಕೆ ವಿಶೇಷ ನೆರವು ಒದಗಿಸಬೇಕು’ ಎಂದು ಮನವಿ ಮಾಡಿದರು.

ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಎ.ಆರ್. ಕೃಷ್ಣಮೂರ್ತಿ, ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ರವಿಶಂಕರ್, ವಿಧಾನಪರಿಷತ್ ಸದಸ್ಯ ಡಾ. ತಿಮ್ಮಯ್ಯ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಮೈಲ್ಯಾಕ್ ಅಧ್ಯಕ್ಷ ಗಣೇಶ್, ಮುಖ್ಯಮಂತ್ರಿಗಳ ವಿಶೇಷ ಕಾರ್ಯದರ್ಶಿ ರಾಮಯ್ಯ, ಮಾಧ್ಯಮ ಸಲಹೆಗಾರ ಪ್ರಭಾಕರ್ ಪಾಲ್ಗೊಂಡಿದ್ದರು.

ಮೈಸೂರು ವಿ.ವಿ.ಗೆ ಅನುದಾನದ ಭರವಸೆ

‘ನಾನೂ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ. ವಿಶ್ವವಿದ್ಯಾಲಯದ ನಿವೃತ್ತ ಸಿಬ್ಬಂದಿಗೆ ವೇತನ ನೀಡಲು ಹಣ ಬಿಡುಗಡೆ ಮಾಡಲಾಗಿದೆ. ಹಂತಹಂತವಾಗಿ ಅಗತ್ಯ ನೆರವು ಒದಗಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ‘ಮೈಸೂರು ಈ ದುಃಸ್ಥಿತಿಗೆ ಹಿಂದಿನ ಕುಲಪತಿಗಳು ಕಾರಣ. ಅದನ್ನು ಸರಿಪಡಿಸಲಾಗುವುದು’ ಎಂದರು. ‘ಬ್ಯಾಕ್‌ಲಾಗ್ ಹುದ್ದೆ ಭರ್ತಿ ಸಂಬಂಧ ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು ಶೀಘ್ರ ಭರ್ತಿ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ಬ್ಯಾಕ್‌ಲಾಗ್ ಹುದ್ದೆ ತುಂಬಿ’

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ. ಶಿವಕುಮಾರ್ ‘‌ಒಬ್ಬ ದಲಿತ ಪತ್ರಕರ್ತ ಪರಿಷತ್ ಪ್ರವೇಶಿಸಲು 79 ವರ್ಷ ಕಾಯಬೇಕಾಯಿತು. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನಿಂದ ಇದು ಸಾಧ್ಯವಾಗಿದೆ’ ಎಂದರು. ‘ಸರ್ಕಾರ ಕೂಡಲೇ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಹಿಂದ ವರ್ಗಗಳ ಜನರ ಜಮೀನುಗಳಿಗೆ ಸಂಬಂಧಿಸಿ ಹಕ್ಕುಪತ್ರ ವಿತರಿಸಬೇಕು. ವಿಶ್ವವಿದ್ಯಾಲಯಗಳು ಹಾಗೂ ಪದವಿ ಕಾಲೇಜುಗಳಲ್ಲಿ ಬೌದ್ಧ ಧರ್ಮದ ಕುರಿತು ವಿಶೇಷ ಪಠ್ಯ ಅಳವಡಿಸಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.