ADVERTISEMENT

ಮೈಸೂರು: ದಸಂಸ ಒಕ್ಕೂಟ ಅಸ್ತಿತ್ವಕ್ಕೆ

ಒಗ್ಗೂಡಿ ಹೋರಾಡಲು ನಿರ್ಧಾರ; ಕೆ.ಬಿ.ಸಿದ್ದಯ್ಯ ಶ್ರದ್ಧಾಂಜಲಿ ಸಭೆಯಲ್ಲಿ ಹರಳುಗಟ್ಟಿದ್ದ ವಿಚಾರ

ವಿಶಾಲಾಕ್ಷಿ
Published 26 ಜುಲೈ 2020, 21:51 IST
Last Updated 26 ಜುಲೈ 2020, 21:51 IST

ಮೈಸೂರು: ಹಂಚಿ ಹೋದ, ದಲಿತ ಸಂಘರ್ಷ ಸಮಿತಿಯ (ದಸಂಸ) ಬಣಗಳನ್ನೆಲ್ಲ ಮತ್ತೆ ಒಗ್ಗೂಡಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ.

ಜಿಲ್ಲೆಯಲ್ಲಿರುವ ಎಲ್ಲಾ ಬಣಗಳ ಮುಖಂಡರೂ ಈ ವೇದಿಕೆಯಡಿ ಬರಲು ಸಮ್ಮತಿಸಿದ್ದು, ರಾಜ್ಯಮಟ್ಟದಲ್ಲಿಯೂ ಒಗ್ಗೂಡಿಸುವ ಆಶಯ ಇದರ ಹಿಂದಿದೆ.

ಪ್ರಸಕ್ತ ಪರಿಸ್ಥಿತಿಯಲ್ಲಿ ಬಿಡಿಬಿಡಿಯಾಗಿ, ಬೇರೆ ದಿಕ್ಕಿನಲ್ಲಿ ನಿಂತು ರಾಜಕೀಯವಾಗಿಯಾಗಲೀ ಸಾಮಾಜಿಕವಾಗಿಯಾಗಲೀ ಆರ್ಥಿಕವಾಗಿಯಾಗಲೀ ತಾವು ಏನನ್ನೂ ಸಾಧಿಸಲಾಗುವುದಿಲ್ಲ ಎಂಬುದನ್ನು ಮನಗಂಡು, ಒಗ್ಗೂಡಲು ಮನಸು ಮಾಡಿರುವ ಬಣಗಳು, ಕಳೆದುಕೊಂಡಿರುವ ತಮ್ಮ ಹೋರಾಟದ ಕಾವನ್ನು ಮತ್ತೆ ಪಡೆಯಲು ಸಜ್ಜಾಗಿವೆ.

ADVERTISEMENT

2006ರಲ್ಲಿ ಇಂಥದೊಂದು ವೇದಿಕೆ ರೂಪಿಸಿಲು ಯೋಜನೆ ಸಿದ್ಧವಾಗಿತ್ತಾದರೂ, ಸಂವಹನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಅದು ನನೆಗುದಿಗೆ ಬಿದ್ದಿತ್ತು. ಅದಕ್ಕಾಗಿ ಆಗಾಗ ಪ್ರಯತ್ನ ನಡೆಯುತ್ತಲೇ ಇದ್ದವಾದರೂ ಅದು ಹರಳುಗಟ್ಟಲು ನೆಪವಾಗಿದ್ದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೈಸೂರಿನಲ್ಲಿ ನಡೆದ ಕವಿ ಕೆ.ಬಿ.ಸಿದ್ದಯ್ಯ ಅವರ ಶ್ರದ್ಧಾಂಜಲಿ ಸಭೆ ಎನ್ನುತ್ತಾರೆ ಒಕ್ಕೂಟದ ಸಂಚಾಲಕ ಬೆಟ್ಟಯ್ಯ ಕೋಟೆ.

ಆ ಸಭೆಯಲ್ಲಿ ಭಾಗವಹಿಸಿದ್ದ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳ ಮುಖಂಡರು, ತಮ್ಮ ಹೋರಾಟದ ಹಿಂದಿದ್ದ ಸಿದ್ದಯ್ಯ ಅವರನ್ನು ಸ್ಮರಿಸುತ್ತ ಆತ್ಮಾವಲೋಕನಕ್ಕೂ ಮುಂದಾದುದರ ಫಲವೇ ಈಗ ಅಸ್ತಿತ್ವಕ್ಕೆ ಬಂದ ಒಕ್ಕೂಟ. 1970ರಲ್ಲಿಯಂತೆ ಹೋರಾಟವನ್ನು ಕಟ್ಟುವುದಕ್ಕಾಗಿ, ಎಲ್ಲರನ್ನೂ ಒಂದೇ ವೇದಿಕೆಯಡಿ ತರುವುದಕ್ಕಾಗಿ ಮೈಸೂರಿನಲ್ಲಿ ಇದು ಒಂದು ಮಾದರಿ ಪ್ರಯತ್ನ ಎಂಬುದು ಒಕ್ಕೂಟದ ಖಜಾಂಚಿ ಆರ್‌.ಎಸ್.ದೊಡ್ಡಣ್ಣ ಅನಿಸಿಕೆ.

‘ಇವತ್ತು ರೈತರ ಸ್ಥಿತಿ ಶೋಚನೀಯವಾಗಿದೆ. ದಲಿತರಿಗಂತೂ ಜೀವನವೇ ಇಲ್ಲ. ನಮ್ಮ ಹೋರಾಟಗಳಲ್ಲಿ ಶಕ್ತಿ ಇಲ್ಲದೆ ಹೋಗಿದ್ದರಿಂದಲೇ ಇವತ್ತು ದಲಿತ ಸಮುದಾಯ ಇಂಥ ಪರಿಸ್ಥಿತಿಯಲ್ಲಿದೆ. ಇದಕ್ಕೆ ಪರೋಕ್ಷವಾಗಿ ನಾವೇ ಕಾರಣರು. ತಪ್ಪುಗಳನ್ನು ತಿದ್ದಿಕೊಂಡು, ಸಂವಿಧಾನದ ಆಶಯಗಳ ಈಡೇರಿಕೆಗಾಗಿ ಒಕ್ಕೂಟ ಅನಿವಾರ್ಯ ಎಂಬ ನಿರ್ಧಾರಕ್ಕೆ ಬರಲಾಯಿತು. ಮೈಸೂರಿನ ಪ್ರಯತ್ನ ಗಮನಿಸಿ, ಬೇರೆ ಜಿಲ್ಲೆಯಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ’ ಎನ್ನುತ್ತಾರೆ ಬೆಟ್ಟಯ್ಯ ಕೋಟೆ.

***

ಹೊಸ ಹೋರಾಟ, ಹೊಸ ಹಾಡು, ಹೊಸ ಘೋಷಣೆ

ದಲಿತ ಸಂಘರ್ಷ ಸಮಿತಿಯ ಬಣಗಳು ಹೆಚ್ಚಿದಂತೆಲ್ಲ ಸಮಿತಿಯಲ್ಲಿದ್ದ ಹಿರಿಯರು, ಬರಹಗಾರರು ಕೂಡ ಹಂಚಿಹೋಗಿದ್ದರಿಂದ ದಲಿತ ಹೋರಾಟಗಳಿಗೆ ಶಕ್ತಿ ಇಲ್ಲದಂತಾಯಿತು. ಆದರೆ, ಇದೀಗ ‘ನನ್ನ’ ಎಂಬುದರ ಬದಲಾಗಿ ‘ನಮ್ಮ’ ನೇತೃತ್ವದಲ್ಲಿ ಹೋರಾಟಗಳು ರೂಪುಗೊಳ್ಳಬೇಕಾಗಿದೆ. ಸಮಿತಿಯ ಸಿದ್ಧಾಂತ, ಆಶಯಗಳಿಗಾಗಿ ಒಗ್ಗೂಡಬೇಕೆಂಬ ಒಳಾಸೆ ಕಾರ್ಯಕರ್ತರು, ಮುಖಂಡರೆಲ್ಲರಲ್ಲೂ ಇದ್ದೇ ಇದೆ. ಆದರೆ, ಇದುವರೆಗೆ ಪೋಷಿಸಿಕೊಂಡ ಬಂದ ಅಹಮ್ಮಿನ ಪೊರೆ ಅದಕ್ಕೆ ಅಡ್ಡಿಮಾಡುತ್ತಿದೆ ಎಂಬುದು ಒಕ್ಕೂಟದ ಪದಾಧಿಕಾರಿಗಳ ಅನಿಸಿಕೆ. ಅದನ್ನು ಕಳಚಲೆಂದೇ ಮೈಸೂರು ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಬದ್ಧತೆಯುಳ್ಳ ಕಾರ್ಯಕರ್ತರ ಸಭೆ ನಡೆಸಿ, ಅವರಿಗೆ ವ್ಯಕ್ತಿತ್ವ ವಿಕಸನ ತರಬೇತಿ ನೀಡುವ ಉದ್ದೇಶವಿದೆ ಎನ್ನುತ್ತಾರೆ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ದೇವನೂರ.

‘ಎದುರಿಸುತ್ತಿರುವ ಸವಾಲು, ಸಂಕಟಗಳು ಹೊಸದಾಗಿದ್ದು ಸಂಕೀರ್ಣವೂ ಆಗಿರುವುದರಿಂದ ನಮ್ಮ ಹೋರಾಟದ ಹಾಡುಗಳು, ಘೋಷಣೆಗಳೂ ಹೊಸದಾಗಿ ಸೃಷ್ಟಿಯಾಗಬೇಕಿದೆ. ಹೊಸ ಬೀದಿನಾಟಕಗಳು ಸಿದ್ಧಗೊಳ್ಳಬೇಕಿದೆ. ಅದಕ್ಕಾಗಿ ಈ ತರಬೇತಿ ಕಾರ್ಯಾಗಾರಗಳನ್ನು ಬಳಸಿಕೊಳ್ಳಲಾಗುವುದು’ ಎಂದು ತಿಳಿಸಿದರು.

***

ಚಳವಳಿಗಳು ಸ್ತಬ್ಧವಾದ ಈ ಸಮಯದಲ್ಲಿ ಇಂಥ ಪ್ರಯತ್ನ ಅಗತ್ಯವಿತ್ತು. ಸಮಗ್ರ ಕರ್ನಾಟಕವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಣಗಳು ಒಗ್ಗೂಡಿದರೆ ಬದಲಾವಣೆ ಸಾಧ್ಯ

-ಸತ್ಯಾನಂದ ಪಾತ್ರೋಟ,ಕವಿ

ಒಗ್ಗೂಡುವುದು ಅನಿವಾರ್ಯ. ಆದರೆ, ಆತುರ ಬೇಡ. ದೇವನೂರ ಮಹಾದೇವ ನೇತೃತ್ವದಲ್ಲಿ ಸಂಘಟನೆ ಒಂದಾಗಬೇಕು ಎಂಬುದು ನಮ್ಮ ಆಶಯ -ಲಕ್ಷ್ಮೀನಾರಾಯಣ ನಾಗವಾರ ಮುಖಂಡ, ದಲಿತ ಸಂಘರ್ಷ ಸಮಿತಿ

ವಿಲೀನ ಪ್ರಕ್ರಿಯೆ ಇನ್ನೂ ಚರ್ಚೆಗೆ ಒಳಪಡಬೇಕು. ನಿಧಾನವಾದರೂ ಸ್ಪಷ್ಟ ನಿರ್ಧಾರದೊಂದಿಗೆ ಮುಂದುವರಿಯಬೇಕು
-ಮಾವಳ್ಳಿ ಶಂಕರ್‌ ಮುಖಂಡ, ದಲಿತ ಸಂಘರ್ಷ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.