ADVERTISEMENT

ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅಣೆಕಟ್ಟೆಗಳು

ಕಿರು ಜಲಪಾತದಂತೆ ಕಂಗೊಳಿಸುತ್ತಿರುವ ಮಾಧವ ಮಂತ್ರಿ ಅಣೆಕಟ್ಟೆ, ಶ್ರೀರಾಮ ಕಟ್ಟೆ, ಕಾವೇರಿ ನಿಸರ್ಗಧಾಮ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 4:12 IST
Last Updated 25 ಜುಲೈ 2021, 4:12 IST
ತಲಕಾಡಿನ ಮಾಧವ ಮಂತ್ರಿ ಅಣೆಕಟ್ಟೆಯ ನೋಟ (ಎಡಚಿತ್ರ). ತಲಕಾಡು ಸಮೀಪದ ಮೇದಿನಿ ಗ್ರಾಮದ ಶ್ರೀರಾಮ ಅಣೆಕಟ್ಟೆ ಕಿರುಜಲಪಾತದಂತೆ ಕಂಗೊಳಿಸುತ್ತಿದೆ
ತಲಕಾಡಿನ ಮಾಧವ ಮಂತ್ರಿ ಅಣೆಕಟ್ಟೆಯ ನೋಟ (ಎಡಚಿತ್ರ). ತಲಕಾಡು ಸಮೀಪದ ಮೇದಿನಿ ಗ್ರಾಮದ ಶ್ರೀರಾಮ ಅಣೆಕಟ್ಟೆ ಕಿರುಜಲಪಾತದಂತೆ ಕಂಗೊಳಿಸುತ್ತಿದೆ   

ತಲಕಾಡು: ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಂದ ನದಿಗಳಿಗೆ ನೀರು ಹರಿಸುತ್ತಿರುವುದರಿಂದ ತಲಕಾಡಿನ ಮಾಧವ ಮಂತ್ರಿ ಅಣೆಕಟ್ಟೆ, ಕಾವೇರಿ ನಿಸರ್ಗಧಾಮ, ಮೇದನಿ ಗ್ರಾಮದ ಶ್ರೀರಾಮ ಕಟ್ಟೆಗಳು ಕಿರು ಜಲಪಾತಗಳಂತೆ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಕೇರಳದ ವೈನಾಡು, ರಾಜ್ಯದ ಕೊಡಗು ಭಾಗಗಳಲ್ಲಿ ಉತ್ತಮ ಮಳೆ ಬೀಳುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯ ಹಾಗೂ ಕಬಿನಿ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ, ಕಾವೇರಿ ಹಾಗೂ ಕಪಿಲಾ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಸಲಾಗುತ್ತಿದೆ.

ನಿಸರ್ಗಧಾಮದಲ್ಲಿ ಪ್ರವಾಸಿಗರು ಮೋಜು– ಮಸ್ತಿಯಲ್ಲಿ ತೊಡಗಿದ್ದಾರೆ. ದೋಣಿ ವಿಹಾರದ ಮೂಲಕ ನದಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮೇದಿನಿ ಗ್ರಾಮದ ಶ್ರೀರಾಮಕಟ್ಟೆ ಸೊಬಗನ್ನು ಸವಿಯಲು ಪ್ರವಾಸಿಗರು ಬರುತ್ತಿದ್ದಾರೆ.

ADVERTISEMENT

‘ಶ್ರೀರಾಮ ಕಟ್ಟೆ ಬಹಳ ಪುರಾತನವಾದದ್ದು. ಈ ಕಟ್ಟೆಯು ಶ್ರೀರಾಮನ ಬಿಲ್ಲಿನ ಆಕಾರದಲ್ಲಿದೆ. ಇದರ ಬಗ್ಗೆ ಮತ್ತಷ್ಟು ಪ್ರಚಾರ ಮಾಡಬೇಕಿದೆ’ ಎಂದು ಮೇದನಿ ಗ್ರಾಮಸ್ಥ ಬಸವರಾಜ್ ತಿಳಿಸಿದರು.

‘ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ನಿಸರ್ಗ ಧಾಮದಲ್ಲಿ ಜಲಕ್ರೀಡೆಗೆ ಅವಕಾಶ ನೀಡಿಲ್ಲ. ಇದರಿಂದ ಬೇಸರವಾಗಿದೆ’ ಎಂದು ಬೆಂಗಳೂರು ನಿವಾಸಿ ಸಂಜಯ್ ಹೇಳಿದರು.

ಗ್ರಾಮಗಳು ಜಲಾವೃತಗೊಳ್ಳುವ ಭೀತಿ: ಜಲಾಶಯಗಳಿಂದ ಕಾಲುವೆ, ಕೆರೆ-ಕಟ್ಟೆಗಳಿಗೆ ನೀರು ಹರಿಸುವುದರಿಂದ, ಬೇಸಾಯದಲ್ಲಿ ತೊಡಗಲು ರೈತರು ಉತ್ಸುಕರಾಗಿದ್ದಾರೆ. ಭೂಮಿಯನ್ನು ಹದ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ತಲಕಾಡು ಹೋಬಳಿಯ ನದಿ ತೀರದ ಗ್ರಾಮಗಳಾದ ತಡಿಮಾಲಂಗಿ, ಕುಕ್ಕೂರು, ಮಡವಾಡಿ ಗ್ರಾಮಗಳು ಜಲಾವೃತಗೊಳ್ಳುವ ಭೀತಿಯಲ್ಲಿ ಜನರಿದ್ದಾರೆ. ಭತ್ತದ ಕಟಾವಿಗೆ ಮಳೆ ಅಡ್ಡಿಪಡಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.