ಹುಣಸೂರು: ತಾಲ್ಲೂಕಿನ ಗೋವಿಂದನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್ ನಗರದಲ್ಲಿ ವಾಸಿಸುತ್ತಿರುವ 30 ಕುಟುಂಬಗಳಿಗೆ ಪೌಷ್ಟಿಕ ಆಹಾರ ಮಂಜೂರು ಮಾಡುವಂತೆ ದಸಂಸ ಸದಸ್ಯರು ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿಗೆ ಮನವಿ ನೀಡಿದರು.
‘ಶನಿವಾರ ಮೈಸೂರಿನಲ್ಲಿ ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಭೇಟಿ ಮಾಡಿ ಮನವಿ ಮಾಡಲಾಗಿದೆ’ ಎಂದು ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಾಚಹಳ್ಳಿ ರಸ್ತೆಯಲ್ಲಿನ ಅಂಬೇಡ್ಕರ್ ನಗರದಲ್ಲಿ ಸರ್ಕಾರಿ ಭೂಮಿಯಲ್ಲಿ 40 ವರ್ಷಗಳಿಂದ ನೆಲೆ ಕಟ್ಟಿಕೊಂಡಿದ್ದ ಕುಟುಂಬಗಳಿಗೆ 94ಸಿ ಯೋಜನೆ ಅಡಿಯಲ್ಲಿ ಮನೆಗಳ ಹಕ್ಕು ಪತ್ರ ಕೊಡಲಾಗಿದೆ. ಇವರು ಮೂಲತಃ ಆದಿವಾಸಿ ಜೇನುಕುರುಬ ಜನಾಂಗಕ್ಕೆ ಸೇರಿದ್ದು, ಇವರ ವೃತ್ತಿ ಜೇನು ಬಸಿಯುವುದು, ಗಿಡಮೂಲಿಕೆ ಔಷಧ ತಯಾರಿಸುವರು. ಈ ಕುಟುಂಬದವರು ತಾಲ್ಲೂಕು ಆಡಳಿತದ ವತಿಯಿಂದ ಜಾತಿ ಪ್ರಮಾಣ ಪತ್ರ ಸೇರಿದಂತೆ ಪಡಿತರ ಚೀಟಿ, ಆಧಾರ್ ಕಾರ್ಡ್ ಹೊಂದಿದ್ದರೂ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯಿಂದ ಈ ಕುಟುಂಬಗಳಿಗೆ ಪೌಷ್ಟಿಕ ಆಹಾರ ವ್ಯವಸ್ಥೆ ಇಲ್ಲವಾಗಿದೆ ಎಂದು ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಐಟಿಡಿಪಿ ಅಧಿಕಾರಿ ಮಲ್ಲೇಶ್ ಮಾತನಾಡಿ, ‘ದಸಂಸ ಹಲವು ಬಾರಿ ಈ ಸಮಸ್ಯೆ ಕುರಿತು ಗಮನಕ್ಕೆ ತಂದಿದ್ದು, ಪರಿಶೀಲಿಸಿ ಜಿಲ್ಲಾಧಿಕಾರಿಗಳೊಂದಿಗೆ ಪ್ರಸ್ತಾಪಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದಾರೆ.
ಭೇಟಿಯಲ್ಲಿ ದಸಂಸ ಮುಖಂಡರಾದ ದಿವಾಕರ್, ದೇವೇಂದ್ರ, ಗಜೇಂದ್ರ, ಅಂಬೇಡ್ಕರ್ ನಗರದ ನಿವಾಸಿಗಳಾದ ವಸಂತಾ, ಕಣ್ಣಮ್ಮ, ಮಂಜುಳಾ, ದೇವಿ, ಮಂಗಳಾ, ಮಣಿ. ಜಯಲಕ್ಷ್ಮಿ, ಗೀತಾ, ಗೋಪಾಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.