ಮೈಸೂರಿನಲ್ಲಿ ಭಾನುವಾರ ನಡೆದ ಡಿವೈಇಎಸ್ ದಸರಾ 10 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಹೆಜ್ಜೆ ಹಾಕಿದ ಸ್ಪರ್ಧಿಗಳು
– ಪ್ರಜಾವಾಣಿ ಚಿತ್ರ/ಅನೂಪ್ ರಾಘ .ಟಿ.
ಮೈಸೂರು: ಪೊಲೀಸ್ ಇಲಾಖೆಯ ಬೆಂಗಳೂರಿನ ಅಥ್ಲೀಟ್‌ಗಳಾದ ಗುರುಪ್ರಸಾದ್ ಮತ್ತು ಸಿ.ಪೂರ್ಣಿಮಾ ಅವರು ದಸರಾ ಮಹೋತ್ಸವ ಅಂಗವಾಗಿ ಭಾನುವಾರ ಇಲ್ಲಿ ನಡೆದ ‘ಡಿವೈಇಎಸ್ ದಸರಾ 10ಕೆ ರಸ್ತೆ ಓಟ’ದಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.
10 ಕಿ.ಮೀ. ದೂರವನ್ನು ಗುರುಪ್ರಸಾದ್ 31 ನಿಮಿಷ 22 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಸಿ.ಪೂರ್ಣಿಮಾ 41 ನಿಮಿಷ 16 ಸೆಕೆಂಡುಗಳಲ್ಲಿ ಗುರಿ ತಲುಪಿದರು.
ಪುರುಷರ ವಿಭಾಗದಲ್ಲಿ ಮೈಸೂರಿನ ಆರ್. ಪುರುಷೋತ್ತಮ್ 31ನಿಮಿಷ 50 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, 32 ನಿಮಿಷ 31 ಸೆಕೆಂಡ್‌ಗಳಲ್ಲಿ ಓಡಿದ ಮೈಸೂರಿನ ಕಾರ್ತಿಕ್ ಪಾಟೀಲ್ ತೃತೀಯ ಸ್ಥಾನ ಗಳಿಸಿದರು.
ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಅಶ್ವಿನಿ ಪೊಲೀಸ್ (41 ನಿಮಿಷ, 39 ಸೆಕೆಂಡ್) ಹಾಗೂ ಎಸ್. ಜಯಶ್ರೀ (42 ನಿಮಿಷ, 57 ಸೆಕಂಡ್) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.
45 ವರ್ಷ ಮೇಲಿನವರಿಗೆ ಪ್ರತ್ಯೇಕ ಬಹುಮಾನ ನೀಡಲಾಯಿತು. ಪುರುಷರ ವಿಭಾಗದಲ್ಲಿ ಕೊಡಗಿನ ಟಿ.ಎಚ್. ಗಣೇಶ್ (40 ನಿಮಿಷ, 53 ಸೆಕೆಂಡ್) ಪ್ರಥಮ, ಮೈಸೂರಿನ ಬಿ.ಪಿ. ಪೊನ್ನಪ್ಪ (46 ನಿಮಿಷ, 06 ಸೆಕೆಂಡ್) ದ್ವಿತೀಯ ಹಾಗೂ ಮೈಸೂರಿನ ಡಾ.ಕೆ.ಆರ್. ರಾಮಕೃಷ್ಣ(47 ನಿಮಿಷ) ತೃತೀಯ ಸ್ಥಾನ ಪಡೆದರು.
ಇದೇ ವಯೋಮಿತಿಯ ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಎಸ್. ಶ್ಯಾಮಲಾ 54 ನಿಮಿಷ, 49 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಮಂಗಳೂರಿನ ಬೀನಾ ಫರ್ನಾಂಡಿಸ್ (55ನಿಮಿಷ, 48 ಸೆಕೆಂಡ್) ದ್ವಿತೀಯ ಹಾಗೂ ಮಂಡ್ಯದ ಎನ್. ಆರ್. ಶೋಭಾ (56ನಿಮಿಷ, 39 ಸೆಕೆಂಡ್) ತೃತೀಯ ಬಹುಮಾನ ಪಡೆದರು.
ಪ್ರತಿ ವಿಭಾಗದಲ್ಲೂ ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ₹10 ಸಾವಿರ, ₹7ಸಾವಿರ ಹಾಗೂ ₹5 ಸಾವಿರ ನಗದು ಬಹುಮಾನ ವಿತರಿಸಲಾಯಿತು. ಮೊದಲ ಹತ್ತು ಸ್ಥಾನ ಪಡೆದವರಿಗೆ ಪದಕ ನೀಡಲಾಯಿತು.
ಚಾಲನೆ: ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಬೆಳಿಗ್ಗೆ 6.45ಕ್ಕೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಆರ್. ಚೇತನ್ ಓಟಕ್ಕೆ ಚಾಲನೆ ನೀಡಿದರು. ಅಲ್ಲಿಂದ ಹಾರ್ಡಿಂಜ್ ವೃತ್ತ, ಕೆ.ಆರ್. ವೃತ್ತ, ಅರಸು ರಸ್ತೆ, ಕಲಾಮಂದಿರ, ಸರಸ್ವತಿಪುರಂ, ಮಹಾರಾಜ ಕಾಲೇಜು ಮೈದಾನ, ರಾಮಸ್ವಾಮಿ ವೃತ್ತ, ಬಸವೇಶ್ವರ ವೃತ್ತ, ಹಾರ್ಡಿಂಜ್ ವೃತ್ತ ಮಾರ್ಗವಾಗಿ ಚಾಮುಂಡಿವಿಹಾರ ಕ್ರೀಡಾಂಗಣಕ್ಕೆ ಸ್ಪರ್ಧಿಗಳು ವಾಪಸಾದರು.
ರಾಜ್ಯದ ವಿವಿಧ ಜಿಲ್ಲೆಗಳ 1,500 ಸ್ಪರ್ಧಿಗಳು ಓಟದಲ್ಲಿ ಉತ್ಸಾಹದ ಹೆಜ್ಜೆ ಹಾಕಿದರು. ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಜಿತೇಂದ್ರ ಶೆಟ್ಟಿ, ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್, ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.