ADVERTISEMENT

ದಸರಾ ಬೊಂಬೆ: ಕೋವಿಡ್‌ನ ಸಂಕಷ್ಟದ ಕಾಲಘಟ್ಟದಲ್ಲೂ ಸಂಪ್ರದಾಯ ಪಾಲನೆ

ಕೋವಿಡ್‌ನ ಸಂಕಷ್ಟದ ಕಾಲಘಟ್ಟದಲ್ಲೂ ಮೈಸೂರಿನಲ್ಲಿ ಪರಂಪರೆಯ ಮುಂದುವರಿಕೆ

ಡಿ.ಬಿ, ನಾಗರಾಜ
Published 21 ಅಕ್ಟೋಬರ್ 2020, 7:43 IST
Last Updated 21 ಅಕ್ಟೋಬರ್ 2020, 7:43 IST
ಮೈಸೂರಿನ ಕುವೆಂಪು ನಗರದ ಲಕ್ಷ್ಮಿ ವೆಂಕಟೇಶ್‌ ನಿವಾಸದಲ್ಲಿ ದೇವರ ಕೋಣೆ ಮುಂಭಾಗ ದಸರಾ ಬೊಂಬೆ ಕೂರಿಸಿರುವುದು
ಮೈಸೂರಿನ ಕುವೆಂಪು ನಗರದ ಲಕ್ಷ್ಮಿ ವೆಂಕಟೇಶ್‌ ನಿವಾಸದಲ್ಲಿ ದೇವರ ಕೋಣೆ ಮುಂಭಾಗ ದಸರಾ ಬೊಂಬೆ ಕೂರಿಸಿರುವುದು   

ಮೈಸೂರು: ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಹಾಗೂ ಪಂಜಿನ ಕವಾಯತಿನಷ್ಟೇ ಖ್ಯಾತವಾದದ್ದು ‘ದಸರಾ ಬೊಂಬೆ’ ಪ್ರದರ್ಶನ.

ಜಂಬೂ ಸವಾರಿ, ಪಂಜಿನ ಕವಾಯತು ಸಾರ್ವಜನಿಕವಾಗಿ ಪ್ರದರ್ಶನ ಗೊಂಡರೆ, ದಸರಾ ಬೊಂಬೆ ಪ್ರದರ್ಶನ ಮೈಸೂರು ನಗರ, ಜಿಲ್ಲೆಯ ಗ್ರಾಮೀಣ ಪ್ರದೇಶವೂ ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳ ಮನೆ ಮನೆಗಳಲ್ಲೂ ಪ್ರದರ್ಶನಗೊಳ್ಳಲಿದೆ. ನವರಾತ್ರಿಯ ಒಂಬತ್ತು ದಿನವೂ ಬೊಂಬೆ ಕೂರಿಸುವ ಮನೆಗಳಲ್ಲಿ ಸಂಭ್ರಮ ಮೇಳೈಸಲಿದೆ.

ಶತ ಶತಮಾನಗಳಿಂದಲೂ ಬೊಂಬೆ ಕೂರಿಸುವ ಸಂಪ್ರದಾಯಹಳೇ ಮೈಸೂರು ಪ್ರಾಂತ್ಯದಲ್ಲಿ ಪರಂಪರೆ ಯಂತೆ ಪಾಲನೆಯಾಗುತ್ತಿದೆ. ಕೋವಿಡ್‌ ಉಲ್ಬಣಿಸುತ್ತಿರುವಸಂದಿಗ್ಧ ಕಾಲಘಟ್ಟ ದಲ್ಲೂ, ಮೈಸೂರಿನ ಹಲವರು ಸಂಪ್ರದಾಯವನ್ನು ಈ ಬಾರಿಯೂ ಚಾಚೂ ತಪ್ಪದೇಅನೂಚಾನವಾಗಿ ಪಾಲಿಸಿದ್ದಾರೆ.

ADVERTISEMENT

ದಶಾವತಾರ, ಸಪ್ತ ಮಾತೃಕೆಯರು, ನವ ದುರ್ಗಿಯರು, ಶಿವ–ಪಾರ್ವತಿ ಕಲ್ಯಾಣ, ಪಾಂಡುರಂಗ ವಿಠ್ಠಲ, ಕಲ್ಪವೃಕ್ಷ, ಜಂಬೂ ಸವಾರಿ, ಬೆಣ್ಣೆ ಕೃಷ್ಣ, ಪಟ್ಟದ ಗೊಂಬೆಗಳು, ಚಾಮುಂಡೇಶ್ವರಿ, ಸರಸ್ವತಿ, ಲಕ್ಷ್ಮಿ, ಅಷ್ಟ ಲಕ್ಷ್ಮೀಯರು, ಭೂ ಕೈಲಾಸ ಸೇರಿದಂತೆ ಇನ್ನಿತರೆ ಮಾದರಿಯ ಬೊಂಬೆಗಳನ್ನು ಕೂರಿಸಿದ್ದಾರೆ.

‘ನನ್ನ ಹುಟ್ಟೂರು ಹಾಸನ ಜಿಲ್ಲೆಯ ಆಲೂರು. ನಮ್ಮ ಮನೆಯಲ್ಲಿ ದಸರಾ ಬೊಂಬೆ ಕೂರಿಸುವುದು ಸಂಪ್ರದಾಯವಾಗಿತ್ತು. 32 ವರ್ಷದ ಹಿಂದೆ ಮದುವೆಯಾಗಿ ಮೈಸೂರಿಗೆ ಬಂದೆ. ಅತ್ತೆ ಮನೆಯಲ್ಲೂ ಬೊಂಬೆ ಕೂರಿಸುವುದು ತಲೆ ತಲಾಂತರ ದಿಂದಲೂ ಪಾಲನೆಯಾಗುತ್ತಿತ್ತು. ಇದೀಗ ನನ್ನ ಮಕ್ಕಳು ಬೊಂಬೆ ಕೂರಿಸುತ್ತಿದ್ದಾರೆ’ ಎಂದು ತಮ್ಮ ಕುಟುಂಬದಲ್ಲಿ ಕೂರಿಸುವ ದಸರಾ ಬೊಂಬೆಯ ಪ‍ರಂಪರೆ ಯನ್ನು ನಿವೇದಿತಾ ನಗರದ ಶ್ರುತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಸ್ತ್ರೋಕ್ತವಾಗಿ ಗೊಂಬೆ ಕೂರಿಸುವುದನ್ನು ಈ ಬಾರಿಯೂ ಪಾಲಿಸಿದ್ದೇವೆ. ಮಡಿಯಿಂದ ಮುಂಜಾನೆ–ಮುಸ್ಸಂಜೆ ಎರಡೂ ಬಾರಿಯೂ ಪೂಜೆ ಸಲ್ಲಿಸುತ್ತೇವೆ. ದೀಪ, ದೂಪ, ನೈವೇದ್ಯ ನಡೆದಿದೆ. ನಿತ್ಯ ಸಂಜೆ ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ ಅರಿಸಿನ–ಕುಂಕುಮ ಕೊಡುವುದನ್ನು ತಪ್ಪಿಸಿಲ್ಲ’ ಎನ್ನುತ್ತಾರೆ ಕುವೆಂಪು ನಗರದ ಲಕ್ಷ್ಮೀ ವೆಂಕಟೇಶ್‌.

‘ಬೊಂಬೆ ಕೂರಿಸುವುದಕ್ಕೆ ತಲೆಮಾರುಗಳ ನಂಟಿದೆ. ವಿಜಯ ದಶಮಿಯವರೆಗೂ ದೇವರ ಮನೆಯಲ್ಲಿ ನಂದಾದೀಪ ಬೆಳಗಲಿದೆ. ನಡು ಮನೆಯಲ್ಲಿ ಸಾವಿರಕ್ಕೂ ಹೆಚ್ಚು ಬೊಂಬೆಗಳನ್ನು ಕೂರಿಸಿದ್ದೇವೆ. ನಿತ್ಯವೂ ಐವರು ಮುತ್ತೈದೆಯರನ್ನು ಮುಸ್ಸಂಜೆ ವೇಳೆಯಲ್ಲಿ ಮನೆಗೆ ಆಹ್ವಾನಿಸಿ, ಫಲ ತಾಂಬೂಲ ಕೊಡುವ ಸಂಪ್ರದಾಯವನ್ನು ಇಂದಿಗೂ ಮುಂದುವರೆಸಿ ದ್ದೇವೆ’ ಎಂದು ಸಿದ್ಧಾರ್ಥ ನಗರದ ಎನ್‌.ಆರ್.ರುಕ್ಮಿಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.