ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹೆಬ್ಬಾಗಿಲು ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಸೋಮವಾರ ‘ಗಜಪಯಣ’ ಆರಂಭವಾಯಿತು. ಆನೆಗಳು ಸಾಗುವ 2 ಕಿ.ಮೀ ದೂರದ ಇಕ್ಕೆಲಗಳಲ್ಲಿ ನಿಂತ ಸಾವಿರಾರು ಜನ ‘ಜಂಬೂಸವಾರಿ’ಯನ್ನು ನೆನಪಿಸಿದರು.
ಐದು ವರ್ಷದಿಂದ ಚಿನ್ನದ ಅಂಬಾರಿ ಹೊರುತ್ತಿರುವ ‘ಕ್ಯಾಪ್ಟನ್‘, ‘ಅಭಿಮನ್ಯು’ ನೇತೃತ್ವದ 9 ಆನೆಗಳನ್ನು ನೋಡಲು ಜನ ಮುಗಿಬಿದ್ದರು. ಹಾಡಿ ನಿವಾಸಿಗಳು, ಗ್ರಾಮಸ್ಥರು, ನೆರೆ ಜಿಲ್ಲೆಗಳ ಜನರಷ್ಟೇ ಅಲ್ಲದೆ, ಈ ಬಾರಿ ವಿದೇಶಿ ಪ್ರವಾಸಿಗರು ಬಂದದ್ದು ವಿಶೇಷ.
ಸಾಂಪ್ರದಾಯಿಕ ಪೂಜೆ: ಅರಣ್ಯ ಸಚಿವ ಈಶ್ವರ ಖಂಡ್ರೆ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಆನೆಗಳಿಗೂ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
‘ಕಾವೇರಿ’, ‘ಲಕ್ಷ್ಮಿ’ ಜೊತೆ ಗಂಭೀರ ಹೆಜ್ಜೆಗಳನ್ನಿರಿಸಿ ಬಂದ 59 ವರ್ಷದ ‘ಅಭಿಮನ್ಯು’ ಸಡಗರಕ್ಕೆ ಕಳೆ ತುಂಬಿದ. ಮತ್ತಿಗೋಡು ಶಿಬಿರದ ಸಹ ಸದಸ್ಯರಾದ ‘ಭೀಮ’, ‘ಮಹೇಂದ್ರ’, ಎರಡನೇ ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ ‘ಏಕಲವ್ಯ’ ಜೊತೆಯಾಗಿದ್ದರು. ಕೊಡಗು ಜಿಲ್ಲೆಯ ದುಬಾರೆ ಶಿಬಿರದ ‘ಧನಂಜಯ’, ‘ಪ್ರಶಾಂತ’, ‘ಕಂಜನ್’, ‘ಕಾವೇರಿ’ ಹಾಗೂ ಬಳ್ಳೆ ಆನೆ ಶಿಬಿರದ ‘ಲಕ್ಷ್ಮಿ’ ಹೆಜ್ಜೆ ಹಾಕಿದವು.
ಅರಮನೆ ಪುರೋಹಿತ ಪ್ರಹ್ಲಾದ್ ರಾವ್ ಪೂಜೆ ನೇತೃತ್ವ ವಹಿಸಿದ್ದರು. ಆನೆಗಳಿಗೆ ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಕಲ್ಲು ಸಕ್ಕರೆ, ಹೋಳಿಗೆ, ಬೆಲ್ಲ, ಕಬ್ಬು, ಮೋದಕ ನೈವೇದ್ಯ ನೀಡಿ ‘ಶೋಡಷೋಪಚಾರ’ ಪೂಜೆ ಮಾಡಿದರು. ಗಣಪತಿ ಅರ್ಚನೆ ಜೊತೆ ವನದೇವತೆ, ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು.
ಮಾವುತರು, ಕಾವಡಿಗಳಿಗೆ ಸಚಿವ ಈಶ್ವರ ಖಂಡ್ರೆ, ಇಲಾಖೆ ಅಧಿಕಾರಿಗಳು ಫಲ–ತಾಂಬೂಲ ನೀಡಿ ಆಹ್ವಾನಿಸಿದರು. ಪೂಜೆ ನಂತರ 2 ಕಿ.ಮೀ ದೂರದವರೆಗೆ ಆನೆಗಳನ್ನು ನಡೆಸಿಕೊಂಡು ಬರಲಾಯಿತು.
ಅರ್ಜುನ’ನ ನೆನಪಿನಲ್ಲಿ ಪ್ರಶಸ್ತಿ
‘ಭೀಮ’ ಆನೆಯ ಮಾವುತ ಗುಂಡಣ್ಣ ಕಾವಾಡಿ ನಂಜುಂಡಸ್ವಾಮಿ ಅವರಿಗೆ ಆನೆ ಸೆರೆ ಕಾರ್ಯಾಚರಣೆಯಲ್ಲಿ ಮೃತಪಟ್ಟ ‘ಅರ್ಜುನ’ ಆನೆಯ ನೆನಪಿನಲ್ಲಿ ‘ಅರ್ಜುನ ಆನೆ ಪ್ರಶಸ್ತಿ’ ಹಾಗೂ ತಲಾ ₹ 10 ಸಾವಿರ ನಗದನ್ನು ಇದೇ ವೇಳೆ ಸಚಿವ ಈಶ್ವರ ಖಂಡ್ರೆ ಪ್ರದಾನ ಮಾಡಿದರು. ಸಂಜೆ ಮೈಸೂರಿನ ಅರಣ್ಯ ಭವನಕ್ಕೆ ಆನೆಗಳು ಆಗಮಿಸಿದವು. ಸೆ.22ರಂದು ನವರಾತ್ರಿ ಆರಂಭವಾಗಲಿದ್ದು ಅ.2ರ ವಿಜಯದಶಮಿ ದಿನ ಜಂಬೂಸವಾರಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.