ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ನಡೆದ 11 ದಿನಗಳಲ್ಲಿ ಇಲ್ಲಿನ ‘ದಸರಾ ವಸ್ತುಪ್ರದರ್ಶನ’ಕ್ಕೆ ಜನರು ದಾಖಲೆಯ ಪ್ರಮಾಣದಲ್ಲಿ ಭೇಟಿ ನೀಡಿದ್ದಾರೆ. 8 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಈ ಬಾರಿ 11 ದಿನ ಅಂದರೆ, ಸೆ.22ರಿಂದ ಅ.2ರವರೆಗೆ ದಸರಾ ನಡೆಯಿತು. ಈ ವೇಳೆಯಲ್ಲಿ ನಿತ್ಯ ಸರಾಸರಿ 70ಸಾವಿರಿಂದ 80ಸಾವಿರ ಮಂದಿ ಹಾಗೂ ಶುಕ್ರವಾರವೊಂದೇ ದಿನ 1 ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ (ದಸರಾ ಅವಧಿಯಲ್ಲಿ) ಅತ್ಯಂತ ಹೆಚ್ಚಿನ ಪ್ರತಿಕ್ರಿಯೆಯಾಗಿದೆ. ಶಾಲಾ–ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರವಾಸಿಗರು ಜಾಸ್ತಿ ಸಂಖ್ಯೆಯಲ್ಲಿ ಸಂದರ್ಶಿಸುತ್ತಿದ್ದಾರೆ. ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಇರುವುದು ಕೂಡ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ವರವಾಗಿ ಪರಿಣಮಿಸಿದೆ.
ಮೂರು ತಿಂಗಳ ಕಾರ್ಯಕ್ರಮ:
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ (ಕೆಇಎ)ದಿಂದ ಆಯೋಜಿಸಿರುವ ವಸ್ತುಪ್ರದರ್ಶನವು ದಸರಾ ಮುಗಿದ ನಂತರವೂ ಸರಾಸರಿ 3 ತಿಂಗಳವರೆಗೆ ಮುಂದುವರಿಯುವ ವಾರ್ಷಿಕ ಕಾರ್ಯಕ್ರಮವಾಗಿದೆ. ಇಲ್ಲಿಗೆ ಸಾರ್ವಜನಿಕರನ್ನು ಆಕರ್ಷಿಸುವುದಕ್ಕಾಗಿ ಪ್ರತಿ ಬಾರಿಯೂ ವಿಶೇಷಗಳನ್ನು ಜೋಡಿಸಲಾಗುತ್ತದೆ. ಈ ಬಾರಿ ಬಹುತೇಕ ವಾಣಿಜ್ಯ ಮಳಿಗೆಗಳು ಭರ್ತಿಯಾಗಿದ್ದು, ವ್ಯಾಪಾರ–ವಹಿವಾಟು ನಡೆಯುತ್ತಿದೆ. ಸರ್ಕಾರಿ ಮಳಿಗೆಗಳು ಕೂಡ ಬಹುತೇಕ ಭರ್ತಿಯಾಗಿವೆ.
‘ಸಂಗೀತ ಕಾರಂಜಿ’ಗೆ ಮಾಜಿ ಸಚಿವ ಅಜೀಜ್ ಸೇಠ್ ಹೆಸರಿಡಲಾಗಿದೆ. ₹ 10 ಕೋಟಿ ಅನುದಾನದಲ್ಲಿ ‘ಸಿದ್ದರಾಮಯ್ಯ ಅಂಕಣ’ ಹೆಸರಿನ ಶಾಶ್ವತ ಮಳಿಗೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೋದ ವರ್ಷಕ್ಕೆ ಹೋಲಿಸಿದರೆ, ವಯಸ್ಕರಿಗೆ ₹ 5 ಪ್ರವೇಶ ಶುಲ್ಕ ಏರಿಸಲಾಗಿದೆ. ಅಂದರೆ ಈಗ ₹ 40 ಪ್ರವೇಶ ಶುಲ್ಕವಿದೆ. ಮಕ್ಕಳಿಗೆ ಹಿಂದಿನಂತೆಯೇ ₹ 25 ಪ್ರವೇಶ ಶುಲ್ಕವಿದೆ. ಒಟ್ಟು 15 ಕೌಂಟರ್‌ಗಳನ್ನು ತೆರೆಯಲಾಗಿದೆ.
ಜನರಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ:
‘ವಸ್ತುಪ್ರದರ್ಶನಕ್ಕೆ ನಿರೀಕ್ಷೆಗೂ ಮೀರಿ ಜನರು ಬರುತ್ತಿದ್ದಾರೆ. ₹ 20 ಕೋಟಿ ವೆಚ್ಚದಲ್ಲಿ ‘ಎ’ ಬ್ಲಾಕ್ ಅಭಿವೃದ್ಧಿಪಡಿಸಿ ಬೇಲೂರು–ಹಳೇಬೀಡು ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ. ‘ಸಂಗೀತ ಕಾರಂಜಿ’ (425 ಅಡಿ ಉದ್ದ ಹಾಗೂ 45 ಅಡಿ ಅಗಲ)ಯನ್ನೂ ಹೊಸದಾಗಿ ಸಿದ್ಧಪಡಿಸಲಾಗಿದೆ. ವಿದ್ಯುತ್ ದೀಪಾಲಂಕಾರವನ್ನು ವಿನೂತನವಾಗಿ ಮಾಡಲಾಗಿದೆ. ಮಕ್ಕಳಿಗೆ ಇಷ್ಟವಾಗುವ ಅಮ್ಯೂಸ್‌ಮೆಂಟ್‌ನಲ್ಲಿ ಜಾಸ್ತಿ ಆಯ್ಕೆಗಳಿವೆ. ಇವೆಲ್ಲವೂ ಜನರಿಗೆ ಇಷ್ಟವಾಗುತ್ತಿದೆ’ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇದೇ ಮೊದಲ ಬಾರಿಗೆ ಸೇನೆ, ನೌಕಾದಳ, ವಾಯುದಳ ಹಾಗೂ ಇಸ್ರೊ ಮಳಿಗೆಗಳನ್ನು ದಸರಾ ದಿನಗಳಲ್ಲಿ ಹಾಕಲಾಗಿತ್ತು. ಅವುಗಳ ಸಾಧನೆಯನ್ನು ಒಂದೇ ಸೂರಿನಲ್ಲಿ ಪ್ರದರ್ಶಿಸಲಾಯಿತು. ನೌಕದಾದಳದ ಬ್ಯಾಂಡ್ (ಐಎನ್ಎಸ್ ಕದಂಬ ಸೇನಾ ಸಿಬ್ಬಂದಿ ಬ್ಯಾಂಡ್‌ಸೆಟ್) ಅನ್ನು ಜನರು ಸಾಕಷ್ಟು ಎಂಜಾಯ್ ಮಾಡಿದರು’ ಎಂದು ಹೇಳಿದರು.
ದಸರಾ ವಸ್ತುಪ್ರದರ್ಶನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಹುತೇಕರು ಕುಟುಂಬ ಸಮೇತ ಬರುತ್ತಿದ್ದಾರೆಅಯೂಬ್ಖಾನ್ ಅಧ್ಯಕ್ಷ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ
ಆಕರ್ಷಕ ವಿನ್ಯಾಸ...
‘154 ವಾಣಿಜ್ಯ ಮಳಿಗೆಗಳಿದ್ದು ಸರ್ಕಾರಿ ಇಲಾಖೆಗಳ ಮಳಿಗೆಗಳು 42 ಇವೆ. ಅವುಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಸರ್ಕಾರದ ಜನಪರ ಯೋಜನೆಗಳನ್ನು ಪರಿಚಯಿಸುವ ಕೆಲಸವನ್ನು ಅಲ್ಲಿ ಮಾಡಲಾಗಿದೆ. ಸಂದರ್ಶಕರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ. 15 ಕೌಂಟರ್‌ಗಳನ್ನು ತೆರೆಯಲಾಗಿದ್ದು ಬರುತ್ತಿರುವ ಜನರನ್ನು ನಿರ್ವಹಿಸಲು ಅದು ಸಾಲದಾಗಿದೆ’ ಎಂದು ಅಯೂಬ್ ಖಾನ್ ಮಾಹಿತಿ ನೀಡಿದರು.
‘ಪ್ರಾಧಿಕಾರಕ್ಕೆ ವರಮಾನ ಹೆಚ್ಚಳ’
ಪ್ರಾಧಿಕಾರವು ವಸ್ತುಪ್ರದರ್ಶನ ಆಯೋಜನೆ ಹಾಗೂ ನಿರ್ವಹಣೆಗೆಂದು ಜಾಗತಿಕ ಟೆಂಡರ್ ಕರೆದಿತ್ತು. ಇದರಲ್ಲಿ ಫನ್‌ವರ್ಲ್ಡ್ ಸಂಸ್ಥೆಯು ಹೆಚ್ಚು ಕೋಟ್ ಮಾಡಿ ಅಂದರೆ ₹ 11.57 ಕೋಟಿ ಮೊತ್ತಕ್ಕೆ ಟೆಂಡರ್ ಪಡೆದುಕೊಂಡಿದೆ. 2024ರಲ್ಲಿ ₹10.03 ಕೋಟಿಗೆ ಟೆಂಡರ್ ಆಗಿತ್ತು. ಈ ಬಾರಿ ಟೆಂಡರ್ ಮೊತ್ತ ಹೆಚ್ಚಾದ್ದರಿಂದ ಪ್ರಾಧಿಕಾರಕ್ಕೆ ವರಮಾನ ಜಾಸ್ತಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.