ADVERTISEMENT

ಚಾಮುಂಡಿ ದೇವರೆಂದು ಬಾನು ಒಪ್ಪುತ್ತಾರಾ?

ಅವರಿಂದ ದಸರಾ ಉದ್ಘಾಟನೆಗೆ ವಿರೋಧ * ಸಿ.ಎಂ ಪರಂಪರೆ ಹಾಳು ಮಾಡುತ್ತಿದ್ದಾರೆ: ಪ್ರತಾಪ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 23:17 IST
Last Updated 24 ಆಗಸ್ಟ್ 2025, 23:17 IST
ಚಾಮುಂಡಿ ಬೆಟ್ಟ
ಚಾಮುಂಡಿ ಬೆಟ್ಟ   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ಉದ್ಘಾಟನೆಗೆ ಹಿಂದೂ ಧಾರ್ಮಿಕ ನಂಬಿಕೆ ವಿರೋಧಿಗಳನ್ನೇ ಏಕೆ ಆಹ್ವಾನಿಸುತ್ತಾರೆ? ಈ ಮೂಲಕ ಅವರು ಮಹಾರಾಜರ ಪರಂಪರೆಯನ್ನು ಹಾಳು ಮಾಡುತ್ತಿದ್ದಾರೆ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆರೋಪಿಸಿದರು.

ಭಾನುವಾರ ಇಲ್ಲಿ ‍ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಾನು ಮುಷ್ತಾಕ್ ಬಗ್ಗೆ ನಮಗೆ ಹೆಮ್ಮೆ ಇದೆ. ಅವರು ಮುಸ್ಲಿಂ ಎಂಬ ಕಾರಣಕ್ಕೆ ನಾನು ಅಪಸ್ವರ ಎತ್ತುತ್ತಿಲ್ಲ. ಅವರ ಸಾಹಿತ್ಯದ ಬಗ್ಗೆ ಗೌರವವಿದೆ. ಆದರೆ, ದಸರಾ ಜಾತ್ಯತೀತತೆಯ ಪ್ರತೀಕವಲ್ಲ. ಇದು ಧಾರ್ಮಿಕ ಆಚರಣೆ’ ಎಂದು ಪ್ರತಿಪಾದಿಸಿದರು. 

‘ದಸರೆಯಲ್ಲಿ ದುರ್ಗಾ ಪೂಜೆ, ನವರಾತ್ರಿ ಉತ್ಸವ ಇರುತ್ತದೆ. ಯದುವಂಶವು ಆರಂಭಿಸಿದ ಧಾರ್ಮಿಕ ಹಬ್ಬವಿದು. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಚಾಲನೆ ಕೊಡಲಾಗುತ್ತದೆ. ನುಗೆ ಚಾಮುಂಡಿ ಮೇಲೆ ನಂಬಿಕೆ ಇದೆಯೇ? ನಾನು ಚಾಮುಂಡಿ ಭಕ್ತೆ ಎಂದು ಹೇಳಿದ್ದಾರೆಯೇ?’ ಎಂದು ಕೇಳಿದರು.

ADVERTISEMENT

‘ಧಾರ್ಮಿಕ ಸಂಕೇತವಾದ ದಸರಾ ಉದ್ಘಾಟನೆಗೆ ಬಾನು ಹೇಗೆ ಸೂಕ್ತ ವ್ಯಕ್ತಿ ಎಂಬುದೇ ನನ್ನ ಪ್ರಶ್ನೆ. ಅಲ್ಲಾ ಬಿಟ್ಟರೆ ಬೇರೆ ದೇವರಿಲ್ಲ ಎನ್ನುತ್ತದೆ ಇಸ್ಲಾಂ. ಹಾಗಾದರೆ ಬಾನು ಚಾಮುಂಡಿಯನ್ನು ದೇವರೆಂದು ಒಪ್ಪುತ್ತಾರೆ? ಅವರ ಧರ್ಮ ಒಪ್ಪುತ್ತದೆಯೇ? ಎಂದು ಪ್ರಶ್ನಿಸಿದರು.

‘ಕಾಂತಾರ’ ಚಲನಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂತು. ಅವರನ್ನು ದಸರಾ ಉದ್ಘಾಟನೆಗೆ ಕರೆಯುತ್ತೀರಾ? ಪ್ರಶಸ್ತಿ ಬಂದವರನ್ನೆಲ್ಲಾ ಆಹ್ವಾನಿಸಲು ಆಗತ್ತದಾ’ ಎಂದು ಪ್ರಶ್ನಿಸಿದರು.

‘ಬರಗೂರು ರಾಮಚಂದ್ರಪ್ಪ ದಸರಾ ಉದ್ಘಾಟನೆಗೆ ಬಂದು, ನಾನು ದೀಪ ಹಚ್ಚುವುದಿಲ್ಲ’ ಎಂದಿದ್ದರು. ಇದು ದಸರಾ ಮಹೋತ್ಸವಕ್ಕೆ ಮಾಡಿದ್ದ ಅಪಮಾನವಲ್ಲವೇ?’ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.