ADVERTISEMENT

ಜಂಬೂಸವಾರಿ: ಆನೆಗಳ ಪಟ್ಟಿ ಸಿದ್ಧ

ಆನೆ ಶಿಬಿರಗಳಿಗೆ ತೆರಳಿ ಪರಿಶೀಲಿಸಿದ ಅರಣ್ಯಾಧಿಕಾರಿಗಳು, ಸದ್ಯದಲ್ಲೇ ಪಿಸಿಸಿಎಫ್‌ಗೆ ವರದಿ

ಕೆ.ಓಂಕಾರ ಮೂರ್ತಿ
Published 11 ಸೆಪ್ಟೆಂಬರ್ 2020, 2:23 IST
Last Updated 11 ಸೆಪ್ಟೆಂಬರ್ 2020, 2:23 IST
ಮತ್ತಿಗೋಡು ಶಿಬಿರದಲ್ಲಿ ಅಭಿಮನ್ಯು ಆನೆ ಪರಿಶೀಲಿಸಿದ ಡಿಸಿಎಫ್‌ ಅಲೆಕ್ಸಾಂಡರ್‌
ಮತ್ತಿಗೋಡು ಶಿಬಿರದಲ್ಲಿ ಅಭಿಮನ್ಯು ಆನೆ ಪರಿಶೀಲಿಸಿದ ಡಿಸಿಎಫ್‌ ಅಲೆಕ್ಸಾಂಡರ್‌   

ಮೈಸೂರು: ಈ ಬಾರಿ ಅರಮನೆ ಆವರಣಕ್ಕೆ ಸೀಮಿತವಾಗಿ ನಡೆಯಲಿರುವ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಪಟ್ಟಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.

ವಿಕ್ರಮ, ವಿಜಯಾ, ಗೋಪಿ, ಕಾವೇರಿ ಆಯ್ಕೆ ಬಹುತೇಕ ಖಚಿತವಾಗಿದೆ. ಆದರೆ, ಅರ್ಜುನ ಆನೆಗೆ 60 ವರ್ಷ ತುಂಬಿರುವುದರಿಂದ ಅಂಬಾರಿ ಹೊರುವ ಆನೆಯ ವಿಚಾರದಲ್ಲಿ ತುಸು ಗೊಂದಲ ಏರ್ಪಟ್ಟಿದೆ. ಅರಣ್ಯ ಇಲಾಖೆ ಮೂಲಗಳ ಪ್ರಕಾರ ಈ ಬಾರಿ ಅಭಿಮನ್ಯು ಆನೆಗೆ ಈ ಅವಕಾಶ ಸಿಗಲಿದೆ. ಸುಪ್ರೀಂಕೋರ್ಟ್‌ ನಿರ್ದೇಶನ‌ದ ಪ್ರಕಾರ 60 ವರ್ಷ ತುಂಬಿದ ಆನೆಗಳ ಮೇಲೆ ಹೆಚ್ಚು ಒತ್ತಡ ಹೇರುವಂತಿಲ್ಲ. ಹೀಗಾಗಿ, ಬಳ್ಳೆ ಶಿಬಿರದಿಂದ ಅರ್ಜುನನನ್ನು ಕರೆತರುವುದು ಅನುಮಾನ.

ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಎಂ.ಜಿ.ಅಲೆಕ್ಸಾಂಡರ್‌ ನೇತೃತ್ವದಲ್ಲಿ ಅಧಿಕಾರಿಗಳು ಆನೆ ಶಿಬಿರಗಳಿಗೆ ಭೇಟಿ ನೀಡಿ ಆನೆಗಳ ಆರೋಗ್ಯ, ದೈಹಿಕ ಸಾಮರ್ಥ್ಯ, ಕಣ್ಣುಗಳನ್ನು ಪರಿಶೀಲಿಸಿದ್ದಾರೆ. ಈ ಬಾರಿ ಐದು ಆನೆಗಳು ಮಾತ್ರ ಮೈಸೂರು ನಗರಕ್ಕೆ ಬರಲಿವೆ.

ADVERTISEMENT

‘ಸಾಕಾನೆ ಶಿಬಿರಗಳಿಗೆ ಭೇಟಿ ನೀಡಿ ಆನೆಗಳನ್ನು ಗುರುತಿಸಿದ್ದೇವೆ. ಎರಡು ದಿನಗಳಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (ಪಿಸಿಸಿಎಫ್‌) ಐದು ಆನೆಗಳ ಬಗ್ಗೆ ವರದಿ ನೀಡಲಿದ್ದೇವೆ. ಮಾವುತರು ತರಬೇತಿ ನೀಡುತ್ತಿದ್ದು, ಎಲ್ಲಾ ಆನೆಗಳು ಆರೋಗ್ಯವಾಗಿವೆ’ ಎಂದು ಅಲೆಕ್ಸಾಂಡರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮತ್ತಿಗೋಡು ಶಿಬಿರಕ್ಕೆ ತೆರಳಿ ಅಭಿಮನ್ಯು (54) ಆನೆ ವೀಕ್ಷಿಸಿದ್ದಾರೆ. ಆನೆಕಾಡು ಶಿಬಿರಕ್ಕೆ ಭೇಟಿ ನೀಡಿ ವಿಕ್ರಮ (47), ವಿಜಯಾ (63) ಹಾಗೂ ದುಬಾರೆ ಶಿಬಿರದಲ್ಲಿ ಗೋಪಿ (38), ಕಾವೇರಿ (42) ಆನೆ ತಪಾಸಣೆ ನಡೆಸಿದ್ದಾರೆ.

ಅಂಬಾರಿ ಹೊರುವ ಅವಕಾಶ ಸಿಗುವ ಸಾಧ್ಯತೆ ಇರುವುದರಿಂದ ಅಭಿಮನ್ಯು ಆನೆಯತ್ತ ಈಗ ಎಲ್ಲರ ಕಣ್ಣು ನೆಟ್ಟಿದೆ. 20 ವರ್ಷಗಳಿಂದ ಈ ಆನೆ ದಸರೆಯಲ್ಲಿ ಪಾಲ್ಗೊಳ್ಳುತ್ತಿದೆ.

ಅರಮನೆ ಕಾರ್ಯಕ್ಕೆ ಆನೆ: ಆಯುಧಪೂಜೆ ಸೇರಿದಂತೆ ಅರಮನೆಯ ಧಾರ್ಮಿಕ ಕಾರ್ಯಕ್ರಮಗಳಿಗೆ ಗಜಪಡೆಯ ಮೂರು ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಪಟ್ಟದಾನೆ ವಿಕ್ರಮ, ನಿಶಾನೆ ಗೋಪಿ ಹಾಗೂ ಕುಮ್ಕಿ ಆನೆ ವಿಜಯಾ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.