ಮೈಸೂರು: ದಸರಾ ‘ಜಂಬೂಸವಾರಿ’ಗೆ 51 ದಿನಗಳಷ್ಟೇ ಬಾಕಿ ಇದ್ದು, ಅಂಬಾರಿ ಆನೆ ‘ಅಭಿಮನ್ಯು’ ನೇತೃತ್ವದ 9 ಆನೆಗಳಿಗೆ ಮಂಗಳವಾರ ತಾಲೀಮು ಆರಂಭವಾಯಿತು.
ಸಾಮಾನ್ಯವಾಗಿ ದಿನದಿನಕ್ಕೆ ನಡಿಗೆಯ ದೂರವನ್ನು ಹೆಚ್ಚಿಸಲಾಗುತ್ತದೆ. ಸೋಮವಾರ ತೂಕ ಪರೀಕ್ಷೆಗೆ 2 ಕಿ.ಮೀ. ದೂರದ ಧನ್ವಂತರಿ ರಸ್ತೆಯ ‘ಸಾಯಿರಾಂ ಎಲೆಕ್ಟ್ರಾನಿಕ್ ವ್ಹೇಬ್ರಿಡ್ಜ್’ಗೆ ಹೆಜ್ಜೆಹಾಕಿದ್ದ ಆನೆಗಳು, ತಾಲೀಮಿನ ಮೊದಲ ದಿನ ಆರ್‌ಎಂಸಿ ವೃತ್ತದವರೆಗೆ ಕ್ರಮಿಸಿ ವಾಪಸಾದವು.
ಗಜಗಳ ವೀಕ್ಷಣೆ: ಜಂಬೂಸವಾರಿ ಪಥವಾದ ಆಲ್ಪರ್ಟ್ ವಿಕ್ಟರ್ ರಸ್ತೆ, ಸಯ್ಯಾಜಿರಾವ್ ರಸ್ತೆಯುದ್ದಕ್ಕೂ ಜನರು ಆನೆಗಳನ್ನು ನೋಡಿ ಕೈಮುಗಿದರು.
ಹೂ ವ್ಯಾಪಾರಿಗಳು ಮಾಲೆ ಎಸೆದು ಧನ್ಯತೆ ಮೆರೆದರು. ಮಕ್ಕಳು ಪೋಷಕರ ಹೆಗಲ ಮೇಲೆ ಕುಳಿತು ಚಪ್ಪಾಳೆ ತಟ್ಟುತ್ತಿದ್ದ ದೃಶ್ಯ ಸಂತಸವನ್ನು ಉಕ್ಕಿಸಿದವು. ಫೋಟೊ ತೆಗೆಯಲು ಜನರು ಮುಗಿಬಿದ್ದರು.
ಅರಮನೆಯ ಆನೆ ಬಿಡಾರದಲ್ಲಿ ಬೆಳಿಗ್ಗೆ 7.30ಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ‘ಅಭಿಮನ್ಯು’ ಹಿಂದೆ ಕಾವೇರಿ, ಭೀಮ, ಏಕಲವ್ಯ, ಲಕ್ಷ್ಮಿ, ಮಹೇಂದ್ರ, ಕಂಜನ್, ಪ್ರಶಾಂತ ಹಾಗೂ ಧನಂಜಯ ಆನೆಗಳು ನಡೆದವು. ಆರ್‌ಎಂಸಿ ವೃತ್ತದ ಸಮೀಪ ಆನೆ ಮಾವುತರು ಹಾಗೂ ಕಾವಾಡಿಗರು ಹೋಟೆಲ್ ಉಪಾಹಾರ ಸವಿದರು.
ಮಧ್ಯದಲ್ಲಿ ಆನೆಗಳು ನಿಂತಾಗ ಮುನ್ನಡೆಯುತ್ತಿದ್ದ ಅಭಿಮನ್ಯು ನಿಂತು ಕಾಯುತ್ತಿದ್ದ. ಮೂರು ಕಡೆ ಲದ್ದಿ ಹಾಕಲು ಒಂದೆರಡು ನಿಮಿಷ ವಿರಮಿಸಿದ ಆನೆಗಳು, ನಂತರ ಯಾವುದೇ ಅಳುಕಿಲ್ಲದೆ ಸರಾಗವಾಗಿ ತಾಲೀಮು ಪೂರ್ಣಗೊಳಿಸಿದವು.
ಗಜಪಡೆಗಳ ಸಾಲಿನ ನಡುವೆ ಅಂತರ ಹೆಚ್ಚಾದಾಗ ಅಭಿಮನ್ಯು, ಭೀಮ ಹಾಗೂ ಧನಂಜಯ ವೇಗ ಕಡಿಮೆಗೊಳಿಸುವುದು, ನಿಲ್ಲುವುದು ಮಾಡುತ್ತಿದ್ದವು. ಬೇರೆ ಕಾಡಿನ ಶಿಬಿರಗಳಿಂದ ಬಂದರೂ ‘ನಾವೆಲ್ಲ ಒಂದೇ’ ಎನ್ನುವ ಭಾವ ಮೂಡಿಸಿದ್ದವು.
ವಾಪಸ್ ಬರುವಾಗ ‘ಧನಂಜಯ’ ಆನೆ ಪಡೆಯನ್ನು ಮುನ್ನಡೆಸಿದನು. ಅವನ ಹಿಂದೆ ಪ್ರಶಾಂತ ಹಾಗೂ ಕಂಜನ್ ಇದ್ದರು. ಕಳೆದ ವರ್ಷ ‘ಧನಂಜಯ’ ಮತ್ತು ‘ಕಂಜನ್’ ಜಗಳವಾಡಿಕೊಂಡಿದ್ದರು.
ದುಬಾರೆ ಶಿಬಿರ ಆನೆಗಳ ಮಧ್ಯೆ ಇದ್ದ ‘ಪ್ರಶಾಂತ’ ಸೌಹಾರ್ದ ಸಾರಿದನು.
ಸಂಜೆಯೂ ಆಯುರ್ವೇದ ಕಾಲೇಜು ವೃತ್ತದವರೆಗೆ ಆನೆಗಳು ಹೆಜ್ಜೆ ಹಾಕಿದವು. 5.28ಕ್ಕೆ ಅರಮನೆಯಿಂದ ಹೊರಟು 6.42ಕ್ಕೆ ವಾಪಸಾದವು.
ಪೊಲೀಸ್ ಭದ್ರತೆ: ಗಜ ಪಡೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಆನೆಗಳ ಮುಂದೆ ರಸ್ತೆಯಲ್ಲಿ ಬಿದ್ದಿರುವ ವಾಹನಗಳ ಮೊಳೆ, ಕಬ್ಬಿಣದ ಚೂರುಗಳು ಆನೆಗಳ ಪಾದಗಳಿಗೆ ಚುಚ್ಚದಿರಲು ಆಯಸ್ಕಾಂತದ ಸರಳಿನ ಬಂಡಿಯನ್ನು ಹಾಕಲಾಗಿತ್ತು.
ಡಿಸಿಎಫ್ ಐ.ಬಿ.ಪ್ರಭುಗೌಡ ಮಾತನಾಡಿ, ‘ಆನೆಗಳಿಗೆ ತೂಕದ ಅನುಸಾರ ಪೌಷ್ಟಿಕ ಆಹಾರ ಕೊಡಲು ಯೋಜಿಸಲಾಗಿದೆ. ವಿವಿಧ ತಾಲೀಮನ್ನೂ ನೀಡಲಾಗುವುದು’ ಎಂದು ಹೇಳಿದರು.
ಆನೆ ದಿನಾಚರಣೆ
ಮೈಸೂರು: ಅರಮನೆ ಆನೆ ಬಿಡಾರದಲ್ಲಿ ಮಂಗಳವಾರ ಅರಣ್ಯ ಇಲಾಖೆಯು ಆಯೋಜಿಸಿದ್ದ ‘ಆನೆ ದಿನಾಚರಣೆ’ಯಲ್ಲಿ ಮಕ್ಕಳು ಪಾಲ್ಗೊಂಡರು. ಕರುಣಾಮಯಿ ಅಂಗವಿಕಲ ಮಕ್ಕಳ ಶಾಲೆಯ ಚಿಣ್ಣರಿಗೆ ಅಧಿಕಾರಿಗಳು ಆನೆಯ ಬಗ್ಗೆ ಪರಿಚಿಯಿಸಿದರು.
ರಂಗನತಿಟ್ಟು ಪಕ್ಷಿಧಾಮದ ಪರಿಸರ ಶಿಕ್ಷಣಾಧಿಕಾರಿ ಗಗನಾ ಅವರು ಆನೆ ಮತ್ತು ಇತರ ವನ್ಯಜೀವಿಗಳ ಮಾಹಿತಿ ನೀಡಿದರು. ವೈದ್ಯ ಡಾ.ಆದರ್ಶ್ ಹಾಜರಿದ್ದರು.
ರಕ್ಷಾ ಬಂಧನ: ಶ್ರೀ ದುರ್ಗಾ ಫೌಂಡೇಷನ್ ಸದಸ್ಯೆಯರು ಮಾವುತರು ಹಾಗೂ ಕಾವಾಡಿಗರಿಗೆ ರಾಖಿ ಕಟ್ಟಿ ಸಿಹಿ ನೀಡಿ ರಕ್ಷಾ ಬಂಧನ ಆಚರಿಸಿದರು. ಅಧ್ಯಕ್ಷೆ ರೇಖಾ ಸದಸ್ಯರಾದ ಖುಷಿ ವಿನು ಕಾವ್ಯಾ ಮುಖಂಡರಾದ ಜಿ.ರಾಘವೇಂದ್ರ ಎಸ್.ಎನ್.ರಾಜೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.