ADVERTISEMENT

ದಸರಾ ಮಹೋತ್ಸವ: ಗಜಪಡೆ ಆಯ್ಕೆ ಪ್ರಕ್ರಿಯೆ ಪ್ರಾರಂಭ

ಜುಲೈ 20ರ ನಂತರ ಆಯ್ಕೆ ಪಟ್ಟಿ ಪ್ರಕಟ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 14:02 IST
Last Updated 2 ಜುಲೈ 2025, 14:02 IST
ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಆರೋಗ್ಯ ತಪಾಸಣೆ ನಡೆಸಿದ ಕ್ಷಣ
ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಆರೋಗ್ಯ ತಪಾಸಣೆ ನಡೆಸಿದ ಕ್ಷಣ   

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ ಯಾವ್ಯಾವ ಆನೆಗಳನ್ನು ಕರೆತರಬೇಕು ಎಂಬ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಿದ್ಧತೆ ಆರಂಭಿಸಿದೆ.

ಈ ಬಾರಿಯ ದಸರಾ ಮಹೋತ್ಸವ ಸೆ.22ರಿಂದ ಅ.2ರವರೆಗೆ ಅಂದರೆ 11 ದಿನಗಳವರೆಗೆ ನಡೆಯಲಿದೆ. ಅ.2ರಂದು ವಿಜಯದಶಮಿ ಮೆರವಣಿಗೆಯು ನಗರದ ರಾಜಮಾರ್ಗದಲ್ಲಿ ಸಾಗಲಿದೆ. ಇದರಲ್ಲಿ ಭಾಗವಹಿಸಲು ‘ತಯಾರಿ’ ನೀಡುವುದಕ್ಕಾಗಿ ಆನೆಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಆ.4ರಂದು ಮಧ್ಯಾಹ್ನ 12ಕ್ಕೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಗ್ರಾಮದ ಬಳಿ ‘ಗಜಪಯಣ’ ಆರಂಭಗೊಳ್ಳಲಿದೆ. ಇದರೊಂದಿಗೆ, ಮಹೋತ್ಸವಕ್ಕೆ ಮುನ್ನುಡಿ ಬರೆಯಲಾಗುತ್ತದೆ.

ಈ ಕಾರಣದಿಂದ, ಇಲಾಖೆಯ ಅಧಿಕಾರಿಗಳು ಆನೆಗಳ ಶಿಬಿರಗಳಿಗೆ ಭೇಟಿ ನೀಡಿ ಆನೆಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಪಶು ವೈದ್ಯಾಧಿಕಾರಿಗಳು ಹಾಗೂ ವಲಯ ಅಧಿಕಾರಿಗಳನ್ನು ಒಳಗೊಂಡ ತಂಡದೊಂದಿಗೆ ವಿವಿಧ ಆನೆ ಶಿಬಿರಗಳಿಗೆ ಭೇಟಿ ಕೊಟ್ಟು ತ‍‍ಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆಯ ವನ್ಯಜೀವಿ ವಿಭಾಗದ ಡಿಸಿಎಫ್‌ ಐ.ಬಿ. ಪ್ರಭುಗೌಡ ತಿಳಿಸಿದ್ದಾರೆ.

ADVERTISEMENT

ಮಾದರಿ ಸಂಗ್ರಹ: ಆನೆ ಶಿಬಿರದಲ್ಲಿರುವ ಹೆಣ್ಣು ಆನೆಗಳ ಗರ್ಭಧಾರಣೆಯ ಪರೀಕ್ಷೆಗಾಗಿ ಅಗತ್ಯವಾದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಆನೆಗಳ ತಾತ್ಕಾಲಿಕ ಪಟ್ಟಿಯನ್ನು ತಯಾರಿಸಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ಪಟ್ಟಿಯನ್ನು ತಯಾರಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಆನೆಗಳ ಆರೋಗ್ಯ ತಪಾಸಣೆ ಕಾರ್ಯ ಪ್ರಗತಿಯಲ್ಲಿದ್ದು ಜುಲೈ 20ರ ನಂತರ ಆಯ್ಕೆ ಪಟ್ಟಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು.
ಐ.ಬಿ. ಪ್ರಭುಗೌಡ, ವನ್ಯಜೀವಿ ವಿಭಾಗದ ಡಿಸಿಎಫ್‌

ಸರ್ಕಾರದಿಂದ ಅನುಮೋದನೆಗೊಂಡ ಆನೆಗಳ ಆಯ್ಕೆ ಪಟ್ಟಿಯನ್ನು ಅರಣ್ಯ ಸಚಿವರು ಪ್ರಕಟಿಸುವರು. ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳ ಪಟ್ಟಿಯನ್ನು ಅರಣ್ಯ ಇಲಾಖೆಯಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

2022ರ ದಸರಾ ಸಂದರ್ಭದಲ್ಲಿ ‘ಲಕ್ಷ್ಮಿ’ ಆನೆಯು ಅಂಬಾವಿಲಾಸ ಅರಮನೆ ಅಂಗಳದಲ್ಲೇ ಗಂಡು ಮರಿಗೆ ಜನ್ಮ ನೀಡಿತ್ತು. ಆನೆಗಳ ಆರೋಗ್ಯ ತಪಾಸಣೆಯನ್ನು ಪ್ರತಿ ವರ್ಷವೂ ನಡೆಸಲಾಗುತ್ತಿತ್ತು. ಆದರೆ, ಲಕ್ಷ್ಮಿ ಆನೆ ಗರ್ಭ ಧರಿಸಿದ್ದು ತಿಳಿದುಬಂದಿರಲಿಲ್ಲ. ತಾಲೀಮಿಗೆ ಬಂದಿದ್ದ ವೇಳೆ ಅರಮನೆ ಆವರಣದಲ್ಲೇ ಜನ್ಮ ನೀಡಿದ್ದ ಘಟನೆಯು ಸಾಕಷ್ಟು ಟೀಕೆಗೆ ಗುರಿಯಾಗಿತ್ತು ಹಾಗೂ ಇಲಾಖೆಯನ್ನು ಮುಜುಗರಕ್ಕೂ ದೂಡಿತ್ತು. ಹೀಗಾಗಿ, ಇಲಾಖೆಯು 2023ನೇ ಸಾಲಿನಿಂದ ಹೆಣ್ಣಾನೆಗಳ ಗರ್ಭಧಾರಣೆ ಪರೀಕ್ಷೆಗೆ ಕ್ರಮ ಕೈಗೊಳ್ಳುತ್ತಾ ಬಂದಿದೆ. 

ವಿವಿಧ ಶಿಬಿರಗಳಿಂದ ಬಂದು, ಅರಮನೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗುವ ಬಿಡಾರಗಳಲ್ಲಿ ಉಳಿಯುವ ಆನೆಗಳಿಗೆ ನಗರದಲ್ಲಿ ತಾಲೀಮು ಕೊಡಲಾಗುತ್ತದೆ. ‘ರಾಜಮಾರ್ಗ’ದಲ್ಲಿ ನಡೆಸುವುದು, ಭಾರ ಹೊರವುದು ಮೊದಲಾದ ತಯಾರಿ ಕೊಡಲಾಗುತ್ತದೆ. ಇದಕ್ಕಾಗಿ ಮುಂಚಿತವಾಗಿಯೇ ಅವುಗಳನ್ನು ಕರೆತರಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.