ಪುರುಷರ ವಿಭಾಗದ ವಿಜೇತರಾದ ಗುರುಪ್ರಸಾದ್, ಪುರುಷೋತ್ತಮ್ ಹಾಗೂ ಕಾರ್ತಿಕ್ ಪಾಟೀಲ
ಮೈಸೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿಯಾದ ಗುರುಪ್ರಸಾದ್ ಹಾಗೂ ಪೂರ್ಣಿಮಾ ಅವರು ಭಾನುವಾರ ಇಲ್ಲಿ ನಡೆದ ಡಿವೈಇಎಸ್ ದಸರಾ 10 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು.
ಗುರುಪ್ರಸಾದ್ 31 ನಿಮಿಷ, 22 ಸೆಕೆಂಡುಗಳಲ್ಲಿ ಗುರಿ ತಲುಪಿದರೆ, ಪೂರ್ಣಿಮಾ ಅವರು 41 ನಿಮಿಷ 16 ಸೆಕೆಂಡ್ ತೆಗೆದುಕೊಂಡರು.
ಪುರುಷರ ವಿಭಾಗದಲ್ಲಿ ಮೈಸೂರಿನ ಪುರುಷೋತ್ತಮ್ ದ್ವಿತೀಯ ಹಾಗೂ ಕಾರ್ತಿಕ್ ಪಾಟೀಲ್ ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಅಶ್ವಿನಿ ಪೊಲೀಸ್ ದ್ವಿತೀಯ ಹಾಗೂ ಎಸ್. ಜಯಶ್ರೀ ತೃತೀಯ ಸ್ಥಾನ ಗಳಿಸಿದರು.
45 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಬಹುಮಾನ ನೀಡಲಾಯಿತು.
ಪ್ರತಿ ವಿಭಾಗದಲ್ಲೂ ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ 10 ಸಾವಿರ, 7 ಸಾವಿರ ಹಾಗೂ 5 ಸಾವಿರ ನಗದು ಬಹುಮಾನ ವಿತರಿಸಲಾಯಿತು.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬೆಳಿಗ್ಗೆ 6.45ಕ್ಕೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಆರ್. ಚೇತನ್ ಓಟಕ್ಕೆ ಚಾಲನೆ ನೀಡಿದರು. ಅಲ್ಲಿಂದ ಹಾರ್ಡಿಂಜ್ ವೃತ್ತ, ಕೆ.ಆರ್. ವೃತ್ತ, ಅರಸು ರಸ್ತೆ, ಕಲಾಮಂದಿರ, ಸರಸ್ವತಿಪುರಂ, ಮಹಾರಾಜ ಕಾಲೇಜು ಮೈದಾನ, ರಾಮಸ್ವಾಮಿ ವೃತ್ತ, ಶಾಂತಲ ಥಿಯೇಟರ್ ವೃತ್ತ, ಬಸವೇಶ್ವರ ವೃತ್ತ, ಹಾರ್ಡಿಂಜ್ ವೃತ್ತ ಮಾರ್ಗವಾಗಿ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಸ್ಪರ್ಧಿಗಳು ವಾಪಸ್ ಆದರು.
ರಾಜ್ಯದ ವಿವಿಧ ಜಿಲ್ಲೆಗಳ 1500 ಸ್ಪರ್ಧಿಗಳು ಓಟದಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.