ADVERTISEMENT

ದಸರಾ: ‘ಪ್ರಜ್ವಲ ಕವಿಗೋಷ್ಠಿ’ಯಲ್ಲಿ ಯುವಜನತೆ, ಮೊಬೈಲ್, ಜಾಲತಾಣದ ಕವಿತೆ

ಎಚ್‌.ಕೆ. ಸುಧೀರ್‌ಕುಮಾರ್
Published 26 ಸೆಪ್ಟೆಂಬರ್ 2025, 4:33 IST
Last Updated 26 ಸೆಪ್ಟೆಂಬರ್ 2025, 4:33 IST
ಮೈಸೂರಿನ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಗುರುವಾರ ದಸರಾ ‘ಪ್ರಜ್ವಲ ಕವಿಗೋಷ್ಠಿ’ಯುನ್ನು ಉದ್ಘಾಟಿಸಿದ ಗೀತ ರಚನಾಕಾರ ಪ್ರಮೋದ್‌ ಮರವಂತೆ ಮಾತನಾಡಿದರು
ಮೈಸೂರಿನ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಗುರುವಾರ ದಸರಾ ‘ಪ್ರಜ್ವಲ ಕವಿಗೋಷ್ಠಿ’ಯುನ್ನು ಉದ್ಘಾಟಿಸಿದ ಗೀತ ರಚನಾಕಾರ ಪ್ರಮೋದ್‌ ಮರವಂತೆ ಮಾತನಾಡಿದರು   

ಮೈಸೂರು: ಚುಟುಕು, ಹನಿಗವನ, ಜೀವನಾನುಭವಗಳ ಮೂಲಕ ನಗೆಗಡಲನ್ನು ಸೃಷ್ಟಿಸಿದ ದಸರಾ ‘ಪ್ರಜ್ವಲ ಕವಿಗೋಷ್ಠಿ’ಯು ಸೈಬರ್‌ ವಂಚನೆ, ಸುರಕ್ಷತೆಯ ಪಾಠವನ್ನೂ ತಿಳಿಸಿತು.

ಇಲ್ಲಿನ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಗುರುವಾರ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಹಾಸ್ಯ ಬರಹಗಾರರು ಹಾಗೂ ಕವಿಗಳು ಲೇಖಕ ಎಂ.ಎಸ್‌.ನರಸಿಂಹಮೂರ್ತಿ ನಿರ್ವಹಣೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಜನರನ್ನು ಸಂಭ್ರಮದಲ್ಲಿ ತೇಲಿಸಿದರು.

ಅಂಬಾರಿ ತಂಡ, ಗಜ ತಂಡ ಎಂಬ ಗುಂಪುಗಳನ್ನು ರಚಿಸಿಕೊಂಡು ‘ಮೊಬೈಲ್, ಕನ್ನಡ ನಾಡು ನುಡಿ, ಯುವಜನತೆ, ಸಂಸ್ಕೃತಿ, ಜಾಲತಾಣ’ ಎಂಬ 5 ವಿಷಯಗಳಲ್ಲಿ ಸಮಕಾಲೀನ ಸಂದರ್ಭವನ್ನು ನವಿರು ಹಾಸ್ಯದ ಮೂಲಕ ಪ್ರಸ್ತುತಪಡಿಸಲಾಯಿತು.

ADVERTISEMENT

‘ಜಾಲತಾಣದಲ್ಲಿ ಜೀಕುವಾಗ ಹಾಲೋಗರ ಉಂಡಂತೆ, ವಂಚಕರ ಕೈಗೆ ಸಿಕ್ಕಾಗ ಕಿಬ್ಬದಿಯ ಕೀಲು ಮುರಿದಂತೆ– ಸ್ವಲ್ಪಜ್ಞ’ ಎಂದು ಸರ್ವಜ್ಞನ ತ್ರಿಪದಿ ಧಾಟಿಯಲ್ಲಿ ಗೋವಿಂದ ಹೆಗಡೆ, ಆನ್‌ಲೈನ್‌ ವಂಚನೆಯತ್ತ ಗಮನ ಸೆಳೆದರು.

‘ಉಳಿದದ್ದು’ ಶೀರ್ಷಿಕೆಯ ಕವನ ಮೂಲಕ ‘ನನ್ನ ಅಕೌಂಟಿನಲ್ಲಿದೆ ನೂರಾರು ಕೋಟಿ, ನನ್ನ ಮುಂದೆ ಯಾರು ಸಾಟಿ. ಸೈಬರ್ ದಾಳಿಕೋರರು ಲೂಟಿ ಲಗ್ಗೆ ಇಟ್ಟ ಮೇಲೆ ಉಳಿದ್ದದ್ದು ಬರೀ ಲಂಗೋಟಿ’ ಎಂಬ ಕವಿಯ ವೇದನೆಗೆ ಪ್ರತಿಕ್ರಿಯಿಸಿದ ನರಸಿಂಹಮೂರ್ತಿ ಅದಾದರೂ ಉಳಿಯಿತಲ್ಲ, ಸಮಾಧಾನದಿಂದಿರಿ ಎಂದು ನೆರೆದವರನ್ನು ನಗೆಗಡಲಿಗೆ ದೂಡಿದರು.

ನೀನೀ ನೀನೀ ಮಂತ್ರ:

‘ನೀ ಮೆಟ್ಟುವ ನೆಲ ಅದೆ ಕರ್ನಾಟಕ, ನೀನೇರುವ ಮಲೆ ಸಹ್ಯಾದ್ರಿ, ನೀ ಮುಟ್ಟುವ ಮರ ಶ್ರೀಗಂಧದ ಮರ, ನೀ ಕುಡಿಯುವ ನೀರ್ ಕಾವೇರಿ’(ನೀನೀ ನೀನೀ) ಈ ಮಂತ್ರವನ್ನು ಡಿಜಿಟಲ್‌ ಅರೆಸ್ಟ್‌ ಮಾಡುವ ಸೈಬರ್‌ ವಂಚಕರ ಪ್ರಶ್ನೆಗೆ ಪ್ರತಿಕ್ರಿಯಿಸಿ. ಮರು ಮಾತನಾಡದೇ ಫೋನ್‌ ಇಡುತ್ತಾರೆ. ಅವರ ಜೊತೆ ಹಿಂದಿ, ಇಂಗ್ಲಿಷ್‌ ಎಂದು ಮಾತನಾಡಿದರೇ ಕಥೆ ಕೆಡುತ್ತದೆ ಹುಷಾರು. ಎನ್ನುವ ಮೂಲಕ ಸೈಬರ್‌ ಸುರಕ್ಷತೆಯ ಪಾಠ ಹೇಳಿದರು.

ಪತಂಗಿ ಎಸ್.ಮುರಳಿ ಅವರ, ‘ಹರಿಶ್ಚಂದ್ರನಂತವರೂ ಬದಲಾಗಿ ಹೋದರು ಮೊಬೈಲ್ ಬಂದು, ಸಮಯ ಪಾಲನೆ ಮಾಡದವರು ಹೇಳಿದರು ಟ್ರಾಫಿಕ್ ಜಾಮ್ ಎಂದು’ ಚುಟುಕು ವಾಸ್ತವಕ್ಕೆ ಕನ್ನಡಿ ಹಿಡಿದಂತಿತ್ತು.

ಶಿವಶಂಕರ್ ಕೆ.ಕಳಸ್ತವಾಡಿ, ‘ಮೊಬೈಲ್ ಮೂಲಕ ತರಿಸಿದ ಶಾಂಪೂ ತುಂಬಾ ಚೆನ್ನಾಗಿ ಕೆಲಸ ಮಾಡಿದೆ. ಕೂದಲು ಉದುರುವುದು ಸಂಪೂರ್ಣ ನಿಂತಿದೆ. ಅದಕ್ಕೆ ಸಾಕ್ಷಿಯಾಗಿ ಒಂದು ಕೂದಲು ಉಳಿದಿದೆ’ ಎಂದು ನಗುನಗುತ್ತಲೇ ಮಾರುಕಟ್ಟೆ ಜಾಗೃತಿ ಮೂಡಿಸಿದರು.

ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಯುವಜನರ ಕುರಿತ ನಗೆಗವನ, ವಿಶೇಷ ಮಾತುಗಳ ಮೂಲಕ ಕವಿಗಳಾದ ಎಲ್.ಗಿರಿಜಾ ರಾಜ್, ಬೆಂ.ಶ್ರೀ.ರವೀಂದ್ರ, ಲಕ್ಷ್ಮೀನಾರಾಯಣ, ವೆಂಕಟೇಶ್‌ ಬಾಗಿ, ಎನ್‌.ಶರಣಪ್ಪ ಮೇಟ್ರಿ, ಹರೀಶ್‌ ನಾಯಕ್‌ ಜನರನ್ನು ರಂಜಿಸಿದರು.

ಕವಯಿತ್ರಿ ವಿ.ಜಿ.ರತ್ನ ಕಾಳೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್‌ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್‌, ಉಪ ಸಮಿತಿಯ ಅಧ್ಯಕ್ಷ ಸುರೇಶ್, ಉಪ ವಿಶೇಷಾಧಿಕಾರಿ ಜಿ.ಸೋಮಶೇಖರ್, ಕಾರ್ಯಾಧ್ಯಕ್ಷೆ ಎನ್.ಕೆ. ಲೋಲಾಕ್ಷಿ, ಉಪಾಧ್ಯಕ್ಷರಾದ ಮಹೇಶ್ ದಳಪತಿ, ಚಂದನ್ ಗೌಡ, ಸಮಿತಿಯ ಮಾದೇಶ್ ಪಾಲ್ಗೊಂಡಿದ್ದರು.

‘ಕೊರತೆ ನೋವುಗಳಿಂದಲೇ ಕವಿತೆ’ 

‘ಕೊರತೆಗಳು ಹಾಗೂ ಅನುಭವಿಸುವ ನೋವುಗಳೇ ಕವಿತೆಯನ್ನು ಸೃಷ್ಟಿಸುತ್ತದೆ’ ಎಂದು ಗೋಷ್ಠಿ ಉದ್ಘಾಟಿಸಿದ ಗೀತ ರಚನೆಕಾರ ಪ್ರಮೋದ್‌ ಮರವಂತೆ ಹೇಳಿದರು. ‘ಮೈಸೂರು ಒಂದು ದೊಡ್ಡ ಬೆರಗು. ಸಾಹಿತ್ಯ ಪ್ರೇಮಿಯಾಗಿ ನನಗೆ ಈ ಊರು ಕೆ.ಎಸ್.ನರಸಿಂಹಸ್ವಾಮಿಯ ಕವನಗಳನ್ನು ನೆನಪಿಸುತ್ತದೆ. ಉತ್ತಮ ಸಿನಿಮಾ ಹಾಡುಗಳಲ್ಲಿ ಸಾಹಿತ್ಯ ಉತ್ತಮವಾಗಿರುವುದೂ ಮುಖ್ಯ’ ಎಂದರು. ‘ಮನೆ ತಂಪಾಗಿರಲು ಮನೆ ಮೇಲಿರಲಿ ಹಂಚು ಮನ ಸಂತಸವಾಗಿರಲು ಪ್ರೀತಿಯನ್ನು ಹಂಚು’ ಎಂಬ ಕಾಲೇಜು ದಿನದಲ್ಲಿ ಬರೆದ ಚುಟುಕನ್ನು ಹಂಚಿಕೊಂಡರು. ಕವಿ ಪ್ರೊ.ಕಾ.ವೆಂ.ಶ್ರೀನಿವಾಸಮೂರ್ತಿ ಮಾತನಾಡಿ ‘ಸಾಹಿತ್ಯದಲ್ಲಿ 9 ರಸಗಳಿದ್ದರೂ ಅದು ಎಲ್ಲ ಕಾವ್ಯದಲ್ಲೂ ಸಮಾನ ಸ್ಥಾನ ಪಡೆದಿರುವುದು ಕಡಿಮೆ. ಹಾಸ್ಯ ರಸವಂತೂ ತುಂಬಾ ಕ್ಷೀಣವಾಗಿದ್ದು ಹೆಚ್ಚಿನ ಆದ್ಯತೆ ಅಗತ್ಯವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.