ಮೈಸೂರು: ದಸರಾ ಪ್ರಯುಕ್ತ ಇಲ್ಲಿನ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣವು ಶನಿವಾರ ರಾಜ್ಯದ ವಿವಿಧ ಭಾಗದ ಯೋಗ ಪಟುಗಳ ಆಗಮನದಿಂದ ನಳನಳಿಸಿತು.
ಯೋಗ ದಸರಾ ಉಪಸಮಿತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಮಾರು 1300 ಅಭ್ಯರ್ಥಿಗಳು ವಿವಿಧ ವಯೋಮಾನದ 12 ವಿಭಾಗಗಳಲ್ಲಿ ಸ್ಪರ್ಧಿಸಿದರು. ಪುರುಷ, ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆದವು. ತಾಡಾಸನ, ಭುಜಂಗಾಸನ, ವೃಕ್ಷಾಸನ, ತ್ರಿಕೋನಾಸನ ಹೀಗೆ ತೀರ್ಪುಗಾರರು ಸೂಚಿಸಿದ ವಿವಿಧ ಆಸನಗಳನ್ನು ಪ್ರದರ್ಶಿಸಿ ಸೈ ಎನಿಸಿಕೊಂಡರು.
ಸುಮಾರು 27 ಅಂಗವಿಕಲ ಪಟುಗಳು ಸ್ಪರ್ಧಿಸುವ ಮೂಲಕ ಸ್ಪರ್ಧೆಗೆ ವಿಶೇಷ ಮೆರುಗು ನೀಡಿದರು.
ಶಾಸಕ ಟಿ.ಎಸ್.ಶ್ರೀವತ್ಸ ಸ್ಪರ್ಧೆಯನ್ನು ಉದ್ಘಾಟಿಸಿ, ‘ಯೋಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಸ್ತಾರಗೊಳಿಸಿದ ಕೀರ್ತಿ ಮೈಸೂರಿಗೆ ಸಲ್ಲುತ್ತದೆ. ಇದು ವಿಶ್ವದ ಯೋಗ ರಾಜಧಾನಿ’ ಎಂದರು.
‘ರಾಜಮನೆತನ ಪರಂಪರೆ ಹೊಂದಿರುವ ನಗರವೂ ಯೋಗದಲ್ಲೂ ತನ್ನದೇ ಪರಂಪರೆಯನ್ನು ಹೊಂದಿದೆ. ಯೋಗಾಸಕ್ತರಿಗೆ ಜನಪ್ರಿಯ ತಾಣವಾಗಿದೆ. ನಾನು ಯೋಗಾಭ್ಯಾಸ ಮಾಡುತ್ತಿದ್ದು, ಮುಂದಿನ ದಸರಾದಲ್ಲಿ ಯೋಗ ಪ್ರದರ್ಶನಕ್ಕೆ ಪ್ರಯತ್ನಿಸುತ್ತೇನೆ’ ಎಂದರು.
ಯೋಗ ದಸರಾ ಉಪ ಸಮಿತಿ ಅಧ್ಯಕ್ಷ ಎನ್.ನಾಗೇಶ್ ಮಾತನಾಡಿ, ‘ಯೋಗ ಕೇವಲ ದೈಹಿಕ ಕಸರತ್ತಿಗಲ್ಲ, ಅದು ಮಾನಸಿಕ ನೆಮ್ಮದಿ, ಏಕಾಗ್ರತೆಗೆ ಸಹಕಾರಿ. ಇದು ಸ್ಪರ್ಧೆ ಎನ್ನುವುದಕ್ಕಿಂತ ಆರೋಗ್ಯ ಸಮತೋಲನ ಕಾಪಾಡಿಕೊಳ್ಳುವ ಸಂದೇಶವನ್ನು ಸಾರುತ್ತದೆ’ ಎಂದರು.
10–12 ವರ್ಷದ ವಿಭಾಗದಲ್ಲಿ 385 ಸ್ಪರ್ಧಿಗಳು, 12–14 ವರ್ಷದ 361 ಸ್ಪರ್ಧಿಗಳು, 14ರಿಂದ 18ವರ್ಷದ 219 ಸ್ಪರ್ಧಿಗಳು, 21ರಿಂದ 35 ವರ್ಷದಲ್ಲಿ 94 ಸ್ಪರ್ಧಿಗಳು, 35ರಿಂದ 45 ವರ್ಷದ 138 ಸ್ಪರ್ಧಿಗಳು, 45– 50 ವರ್ಷದ 106 ಸ್ಪರ್ಧಿಗಳು, 55– 65 ವರ್ಷದ 49 ಸ್ಪರ್ಧಿಗಳು, 65 ವರ್ಷ ಮೇಲ್ಪಟ್ಟ 42 ಸ್ಪರ್ಧಿಗಳು, ಅಂಗವಿಕಲರ ವಿಭಾಗದಲ್ಲಿ 27 ಸ್ಪರ್ಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮಿತಿಯ ಉಪ ವಿಶೇಷಾಧಿಕಾರಿ ಕೆ.ರಮ್ಯಾ, ಕಾರ್ಯಾಧ್ಯಕ್ಷೆ ನಿರೂಪ್ ವೆಸ್ಲಿ, ಸಹ ಕಾರ್ಯಾಧ್ಯಕ್ಷರಾದ ಶಿಲ್ಪಾ, ರೇಣುಕಾದೇವಿ, ಉಪ ಸಮಿತಿಯ ಉಪಾಧ್ಯಕ್ಷರಾದ ಪ್ರಸಾದ್ ನಾಡನಹಳ್ಳಿ, ನಂಜುಂಡಸ್ವಾಮಿ, ಕೆ.ಜಿ.ದೇವರಾಜ್, ಮಹೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.